ಜಿಲ್ಲೆ

ತುಳುನಾಡಿನ ನಂಬಿಕೆಯ ಕೊರಗಜ್ಜ ,ಕಾರ್ಣಿಕದ ಕೊರಗಜ್ಜನ ಇತಿಹಾಸ ಗೊತ್ತಾ, ಇಲ್ಲಿದೆ ಓದಿ -Vishwanews24

Special story

ತುಳುನಾಡಿನ ಮಟ್ಟಿಗೆ ಆ ಹೆಸರೇ ಒಂದು ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಉದಾಹರಣೆಯಿದೆ. ಅದರಲ್ಲೂ ಎಷ್ಟೇ ಬೆಳೆಬಾಳುವ ವಸ್ತುಗಳು ಕಳೆದು ಹೋದರೂ ದಿಕ್ಕೇ ತೋಚದ ಲಕ್ಷಾಂತರ ಜನ ಮೊದಲು ಕರೆಯುವುದೇ ಆ ದೈವದ ಹೆಸರು. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ.

ತುಳುನಾಡಿನ ಅದೆಷ್ಟೋ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ‌ ಮೊದಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸೂರ್ಯನಷ್ಟೇ ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ. ಇನ್ನು ಕಷ್ಟಗಳು ಎದುರಾದಗಲೂ ಭಕ್ತ ವಲಯ ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲಾ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ “ಕೊರಗಜ್ಜ’ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದ್ದು, ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ ನೆಲೆ ನಿಂತಿದ್ದಾನೆ.(ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತದೆ. ಕೊರಗಜ್ಜ ಸಮಾನತೆ ಸಾರುವ ದೈವವಾಗಿ ಎಲ್ಲ ಜಾತಿ ಹಾಗೂ ಧರ್ಮದ ಜನರು ಅಜ್ಜ ಎಂದು ನಂಬಿಕೊಂಡು ಬಂದಿದ್ದಾರೆ.

ಸಾಮಾಜಿಕ ನ್ಯಾಯದ ಪ್ರತೀಕವಾಗಿ ಆರಾಧಿಸುವ ಕೊರಗಜ್ಜನನ್ನು ತುಳುನಾಡಿನ ಪ್ರತಿಯೊಂದು ಜಾತಿ ಧರ್ಮದ ಜನರು ನಂಬಿಕೊಂಡು ಬಂದಿದ್ದಾರೆ. ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಕೂಡ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದ್ದು, ಆಚರಣೆಗಳು ಮಾತ್ರ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿದೆ.

ಕಳೆದು ಹೋದ ವಸ್ತು ಮತ್ತೆ ಸಿಗುತ್ತದೆ!
ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ. ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ `ಅಜ್ಜ’ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ

ಏಳು ಕಲ್ಲಿನಲ್ಲಿ ಪೂಜಿಸಲ್ಪಡುವ ಕೊರಗಜ್ಜ!
ಹೊರ ರಾಜ್ಯದ ಅರಸು ದೈವಗಳು ಕುತ್ತಾರು ಪ್ರದೇಶದ ಮೂಲ ದೈವಗಳಾದ ಪಂಜಂದಾಯ ಹಾಗೂ ಬಂಟ ದೈವಗಳ ಜಾಗದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೊರಗತನಿಯಲ್ಲಿ ಬಂದ ಅರಸು ದೈವಗಳನ್ನು ಹೇಗಾದರೂ ಓಡಿಸುವಂತೆ ಕೇಳಿಕೊಳ್ಳುತ್ತಾರೆ. ಆಗ ಕೊರಗತನಿಯ(ಕೊರಗಜ್ಜ) ನಾನು ಅವರನ್ನು ಓಡಿಸಿದರೆ ನನಗೇನು ಕೊಡುತ್ತಿರಿ ಎಂದು ಕೇಳಿದಾಗ ತುಳುನಾಡಿನ ಪ್ರತಿಯೊಬ್ಬರು ನಿನ್ನನ್ನು ಆರಾಧಿಸುವಂತೆ, ಮನೆ ಮನೆಯಲ್ಲಿ ಅಗೆಲು ಹಾಗೂ ಕೋಲ ಸೇವೆ ನಿನಗೆ ನೀಡುವಂತೆ ಹಾಗೂ ಈ ಪ್ರದೇಶದ ಏಳು ಕಲ್ಲಿನಲ್ಲಿ ನಿನ್ನನ್ನು ಪೂಜಿಸಲಾಗುತ್ತದೆ ಎಂಬ ಆಭಯವನ್ನು ನೀಡುತ್ತಾರೆ. ದೈವಗಳ ಮಾತಿನ ನಂತರ ಕೊರಗ ತನಿಯ ದನದ ರಕ್ತವನ್ನು ಚೆಲ್ಲುತ್ತಾ ಅರಸು ದೈವಗಳನ್ನು ಓಡಿಸುತ್ತಾರೆ. ಮುಂದೆ ಡೆಕ್ಕಾರು ಕಲ್ಲು, ಬೊಳ್ಯಕಲ್ಲು(ರಾಣಿಪುರ), ಕಲ್ಲಾಪಿನಲ್ಲಿ, ಮುನ್ನೂರು ಗ್ರಾಮದಲ್ಲಿ, ಸೋಮೇಶ್ವರ ಕಲ್ಲು(ಯೆನೆಪೋಯ ಮೆಡಿಕಲ್ ಕಲೇಜು ಬಳಿ), ದೇರಳಕಟ್ಟೆ ಬಳಿಯ ಕಲ್ಲು ಹಾಗೂ ಕುತ್ತಾರು ಮೂಲಸ್ಥಾನದ ಕಲ್ಲು ಸೇರಿದಂತೆ ಏಳು ಕಡೆಗಳಲ್ಲಿ ಏಳು ಕಲ್ಲಿನಲ್ಲಿ ಕೊರಗಜ್ಜನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಪಾಡ್ದನ ಕಥೆಯಲ್ಲಿ ಹೇಳಲಾಗುತ್ತಿದೆ.

ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ! 
ಕೊರಗಜ್ಜನ ಭಕ್ತರು ಕುತ್ತಾರು ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ವಾಹನದ ಹೆಡ್‍ಲೈಟ್ ಹಾಕುವುದಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ. ಅನಾದಿಕಾಲದಿಂದಲೂ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದ್ದು. ಅಜ್ಜನ ಬಗೆಗಿನ ಮೂಲ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿಗೂ ಕೂಡ ಅಜ್ಜನ ಅಗೇಲು ಸೇವೆ ಹಾಗೂ ಕೋಲ ಸೇವೆ ನಡೆಯುವ ಸಂದರ್ಭದಲ್ಲಿ ದೀಪ ಹಚ್ಚುವಂತಿಲ್ಲ, ಯಾವುದೇ ಬೆಳಕು ಹಾಕುವಂತಿಲ್ಲ. ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ಬಹುತೇಕ ಎಲ್ಲ ವಾಹನಗಳು ಹೆಡ್‍ಲೈಟ್ ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಈ ಹಿಂದೆ ಅನ್ಯ ಧರ್ಮದ ಯಾವುದೋ ಕಾರ್ಯಕ್ರಮದ ಸಂದರ್ಭ ಈ ಭಾಗದಲ್ಲಿ ಗ್ಯಾಸ್ಲೈಟ್ ಹಿಡಿದುಕೊಂಡು ಈ ಭಾಗದಲ್ಲಿ ಹೋಗುತ್ತಾರಂತೆ. ಈ ವೇಳೆ ಸ್ಥಳೀಯರು ಅಜ್ಜನ ಕಟ್ಟೆಯ ಬಳಿಯಲ್ಲಿ ಬೆಳಕನ್ನು ಹಾಕಬಾರದು ಎಂದು ಅವರಿಗೆ ಸಲಹೆ ನೀಡುತ್ತಾರಂತೆ. ಆದರೂ ಅದನ್ನು ಲೆಕ್ಕಿಸದೇ ಮುಂದೆ ನಡೆದ ಸಂದರ್ಭ ಅಲ್ಲಿಂದ ಮುಂದೆ ಸಾಗುವಾಗಲೇ ಆ ಮೂರು ಗ್ಯಾಸ್‍ಲೈಟ್‍ಗಳು ಪುಡಿಯಾಗುತ್ತದಂತೆ. ಅಷ್ಟೇ ಅಲ್ಲದೇ ಅವರು ಎಷ್ಟು ನಡೆದರೂ ಸಹ ಅವರು ಮುಟ್ಟಬೇಕಾದ ಸ್ಥಳ ಸಿಗುವುದಿಲ್ಲ, ನಂತರ ಅಜ್ಜನ ಕಟ್ಟೆಯ ಬಳಿ ಬಂದು ತಪ್ಪಾಯಿತೆಂದು ಬೇಡಿಕೊಂಡ ನಂತರವೇ ಅವರು ತಲುಪಬೇಕಾದ ಜಾಗಕ್ಕೆ ತಲುಪಿದರು ಎಂಬ ಕಥೆಯನ್ನು 75ರ ಹರೆಯದ ಭಕ್ತರೊಬ್ಬರು ವಿವರಿಸುತ್ತಾರೆ.

ಅಜ್ಜನೆಂದರೇ ಎಲ್ಲಿಲ್ಲದ ನಂಬಿಕೆ:

ಕೊರಗಜ್ಜ ಅಥವಾ ಕೊರಗತನಿಯ ಎಂದು ಪ್ರೀತಿಯಿಂದ ಆರಾಧಿಸುವ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ. ಯಾರೂ ಕೈ ಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ಮಾತು ಈ ಭಾಗದಲ್ಲಿ ಭಕ್ತರ ಬಾಯಿಯಲ್ಲಿ ಕೇಳಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಸಂದರ್ಭದಲ್ಲಿ, ಹಟ್ಟಿಯಲ್ಲಿ ದನ ಕರು ಹಾಕುವ ಸಂದರ್ಭ, ಮಗು ಹುಟ್ಟಿದ ಸಂದರ್ಭದಲ್ಲಿ ಅಜ್ಜನಿಗೆ ವಿಶೇಷವಾಗಿ ಮದ್ಯ, ಶೇಂದಿ ಅಥವಾ ಅಜ್ಜನಿಗೆ ಪ್ರಿಯವಾದ ಪದಾರ್ಥಗಳನ್ನು ಭಕ್ತಿಯಿಂದ ನೀಡಲಾಗುತ್ತದೆ. ಹೊಸ ವಾಹನವನ್ನು ಖರೀದಿಸುವರು ಅಜ್ಜನ ಹೆಸರನ್ನು ತಮ್ಮ ವಾಹನದಲ್ಲಿ ಸ್ವಾಮಿ ಕೊರಗಜ್ಜ ಎಂದು ಹಾಕುತ್ತಾರೆ. ಈ ಮೂಲಕ ಅಜ್ಜನನ್ನು ತುಳುನಾಡಿನ ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು.

ಅಗೆಲು ಸೇವೆ ಹಾಗೂ ಕೋಲ ಸೇವೆ:

ಕುತ್ತಾರು ಅಜ್ಜನ ಕಟ್ಟೆಯಲ್ಲಿ ಭಕ್ತಾದಿಗಳಿಂದ ಅಗೇಲು ಸೇವೆ ಹಾಗೂ ಕೋಲ ಸೇವೆ ನಡೆಯುತ್ತದೆ. ಕುತ್ತಾರಿನಲ್ಲಿ ಅಜ್ಜನ ಕಟ್ಟೆಯಲ್ಲಿ ಮಾತ್ರವಲ್ಲದೆ ತುಳುನಾಡಿನಲ್ಲಿ ಅಜ್ಜನ ಕಟ್ಟೆ ಎಂದು ನಂಬುವಲ್ಲಿ ಹರಕೆಯ ಅಗೇಲು ಸೇವೆ ಹಾಗೂ ಕೋಲಗಳನ್ನು ನಡೆಸಲಾಗುತ್ತದೆ. ಅಜ್ಜನಿಗೆ ಹರಕೆಯ ರೂಪದಲ್ಲಿ ನೀಡುವ ಅಗೇಲು ಸೇವೆಯಲ್ಲಿ ಕುಡು ಬಸಳೆ(ಹುರುಳಿ ಹಾಗೂ ಬಸಳೆ)ಯ ಪದಾರ್ಥ, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಉಪ್ಪಿನ ಕಾಯಿಯನ್ನು ಬಾಲೆಯ ಎಲೆಯಲ್ಲಿ ಬಡಿಸಲಾಗುತ್ತದೆ. ಚಕ್ಕುಲಿ, ಶೇಂದಿ, ಮದ್ಯ, ಎಲೆ ಅಡಿಕೆ ಈ ಸಂದರ್ಭದಲ್ಲಿ ಬಡಿಸಲಾಗುತ್ತದೆ. ಕುತ್ತಾರು ಕೊರಗಜ್ಜನ ಕಟ್ಟೆಗೆ ಸಂಜೆ 7 ಗಂಟೆಯ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ. ಪ್ರಾತಃಕಾಲದಿಂದ ಸಂಜೆಯವರೆಗೂ ನೂರಾರು ಭಕ್ತರು ಕ್ಷೇತ್ರಕ್ಕೆ ಬಂದು ಅಜ್ಜನಲ್ಲಿ ಬಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಅಪಪ್ರಚಾರ ಮಾಡಿದವರನ್ನು ಅಜ್ಜ ಸುಮ್ಮನೆ ಬೀಡುವುದಿಲ್ಲ!
ನಂಬಿದವರನ್ನು ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕೊರಗಜ್ಜನ ಮಾತಿಗೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಪಡುಬಿದ್ರೆಯ ಕಟಪಾಡಿ ಪೇಟೆಬೆಟ್ಟುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಅನ್ಯಕೋಮಿನ ಯುವಕರು ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಹಾಕುತ್ತಾರೆ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ಮತ್ತೊಬ್ಬನಿಗೆ ಸೊಂಟದ ಕೆಳಗೆ, ಎರಡು ಕಾಲು ಬಲಹೀನವಾಗುತ್ತದೆ. ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಪಪ್ರಚಾರವಾದ ಬಗ್ಗೆ ತಿಳಿದು ಬರುತ್ತದೆ. ನಂತರ ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ದೈವಗಳ ಮುಂದೆ ಕ್ಷಮೆಯಾಚಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿದ್ದ ಮನೋಜ್ ಪಂಡಿತ್ ಎಂಬಾತನ ವಿರುದ್ದ ಕೇಸು ದಾಖಲಾಗಿತ್ತು. ಬಳಿಕ ಈತನ ತಾಯಿಗೆ ತೀವ್ರ ಅನಾರೋಗ್ಯವಾಗಿ ತನ್ನ ತಪ್ಪಿನಿಂದ ಹಾಗೂ ದೈವನಿಂದನೆಯಿಂದ ಹೀಗಾಗಿದೆ ಎಂದು ತಿಳಿದು ನಂತರ ವಿಚಾರವಾದಿಯಾಗಿದ್ದರೂ ಸಹ ಈತನೂ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷೆಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೊರಗ ತನಿಯ ಕೊರಗಜ್ಜನಾದ ಕಥೆ
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಮಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯಾಗುವುದಿಲ್ಲ. ಕಡೆಗೆ ಆ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ಶೇಂದಿ ಎಲ್ಲಾ ಖಾಲಿಯಾದ್ರೆ ಕಂಚಿನ ಪೆÇಡಕೆಯನ್ನು ಅರ್ಪಿಸುತ್ತೇನೆಂದು ಹರಕೆ ಮಾಡುತ್ತಾನೆ. ಆವಾಗ ಶೇಂದಿ ಎಲ್ಲಾ ಖಾಲಿಯಾಗುತ್ತದೆ. ಖಾಲಿಯಾದ ಖುಷಿಯಲ್ಲಿ ತನಿಯನಿಗೆ ಅಡಿಕೆ ಮರದ ಎಲೆಯಿಂದ ಪೆÇಣಲಿಯನ್ನು ಮಾಡಿಕೊಡುತ್ತಾರೆ.

ಹೀಗೆ ಕಾಲ ಕಳೆದಂತೆ ತನಿಯ ದೊಡ್ಡವನಾಗುತ್ತಾನೆ. ಕದ್ರಿಗೆ ಹೇಳಿದ ಹರಕೆಯ ಪ್ರಕಾರ ಮೈರಕ್ಕ ಬೈದಿದಿ ಕಂಚಿನ ಪೆÇಡಕೆಯನ್ನು ಮಾಡಿಸುತ್ತಾಳೆ. ಅದನ್ನು ಎತ್ತಲು ಏಳು ಜನರ ಸಹಾಯ ಬೇಕಿತ್ತು. ಏಳು ಮಂದಿಯ ಊಟ, ಶೇಂದಿ, ಎಲೆ ಅಡಿಕೆಯನ್ನು ತಿಂದು ಏಳು ಜನ ಎತ್ತಿ ಹರಕೆ ತೀರಿಸುವ ಬದಲು ಅವನೊಬ್ಬನೇ ಅದನ್ನೆತ್ತಿಕೊಂಡು ಹೋಗಿ ಕದ್ರಿಯ ದೇವಾಸ್ಥಾನ ಹರಕೆಯನ್ನು ತೀರಿಸುತ್ತಾನೆ. ಅದನ್ನು ನೋಡಿದ ಜನರಿಗೆ ಆಶ್ಚರ್ಯವೆನಿಸುತ್ತದೆ. ತನಿಯ ಒಬ್ಬ ಅಸಾಮಾನ್ಯ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಾರೆ. ದೈವಸ್ಥಾನದ ಹೊರಗೆ ಮಾಪಾಲ ಹುಳಿಯನ್ನು ತನ್ನ ಹೆಂಡತಿ ಕೊಯ್ಯಲು ಹೋಗುವಾಗ ಮಾಯವಾಗಿ ಮಾಯಾ ಕಲ್ಲಾಗಿ ಅಲ್ಲಿ ನೆಲೆಯಾಗಿ ತುಳುನಾಡಿನ ಶಕ್ತಿಯಾಗಿ ಮೆರೆಯುತ್ತಾನೆ ಎಂದು ಪಾಡ್ದನ ಹೇಳಿದರೆ ಇನ್ನೊಂದು ಪಾಡ್ದನದ ಪ್ರಕಾರ ಮಾಪಲ ಹುಳಿಯನ್ನು ಕೊಯ್ಯಲು ಹೋಗುವಾಗ ಬ್ರಾಹ್ಮಣರು ಅವರನ್ನು ಕಡಿದು ಕೊಲ್ಲಲಾಗಿದೆ. ಅ ಮೇಲೆ ಅವರಿಗೆ ದೋಷ ಕಂಡು ಬರುವಾಗ ಕೊರಗಜ್ಜ ಎಂಬ ಹೆಸರಿನಲ್ಲಿ ನಂಬಿದರು ಎಂಬ ಪ್ರತೀತಿ ಇದೆ. ಇವೆಲ್ಲವೂ ಪಾಡ್ಹನ ಮೂಲಕ ಹೇಳಲಾಗುವ ಕಥೆಗಳಾಗಿದ್ದು ತುಳುನಾಡಿನ ಪ್ರತಿಯೊಂದು ದೈವಗಳ ಇತಿಹಾಸವು ಅಲಿಖಿತವಾಗಿದೆ.

ಕೊರಗಜ್ಜ ಕೋಲ ಸೇವೆ:

ತುಳುನಾಡಿನ ದೈವರಾಧನೆಯಲ್ಲಿ ಕೋಲ ಸೇವೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು ,

ತಲೆಗೆ ಪಾಲೆಡ ಮುಟ್ಟಾಳೆ(ಅಡಿಕೆಯ ಹಾಳೆಯಿಂದ ಮಾಡಿದ ಕವಚ)ಸೊಂಟಕ್ಕೆ ಗೆಜ್ಜೆಯ ಪಟ್ಟಿ ಮೈ ತುಂಬಾ ಕಪ್ಪು ಮಸಿಯನ್ನು ಹಾಗೂ ಕೈಯಲ್ಲೊಂದು ಬೆತ್ತವನ್ನು ಹಿಡಿದು ನರ್ತನವನ್ನು ಮಾಡುತ್ತಾರೆ.ಕೊರಗಜ್ಜನ ಕೋಲದಲ್ಲಿ ಪಾಡ್ಹನ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಚಿತ್ರ ಕೃಪೆ:ಅನೂಪ್ ಸೂರಿಂಜೆ

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago