‘ದೇಶದ ಪ್ರಧಾನಿ ಒಬ್ಬ ಮೋಸಗಾರ, ಮೋಸಗಾರನನ್ನು ಪ್ರಧಾನಿಯಾಗಿ ಮಾಡಲಾಗಿದೆ’ :ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಕಲಬುರ್ಗಿ: ದೇಶದ ಪ್ರಧಾನಿ ಒಬ್ಬ ಮೋಸಗಾರ, ಮೋಸಗಾರನನ್ನು ಪ್ರಧಾನಿಯಾಗಿ ಮಾಡಲಾಗಿದೆ. ಅಚ್ಚೆದಿನ್ ಅಚ್ಚೆದಿನ್ ಅಂತಾ ಜನರಿಗೆ ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಕಲಬುರ್ಗಿಗೆ ಆಗಮಿಸಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶವನ್ನೇ ಕೊಳ್ಳೆ ಹೊಡೆದು ವಿದೇಶಕ್ಕೆ ಹಾರುವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಪ್ರಧಾನಿ ವಿರುದ್ಧ ಕಿಡಿಕಾರಿದರು. ಇನ್ನು ಕರ್ನಾಟಕಕ್ಕೆ ಯಡಿಯೂರಪ್ಪ ಕೊಡುಗೆ ಶೂನ್ಯ. ಅಲ್ಲದೇ ಏರ್ ಇಂಡಿಯಾ ಶೋ ಹೋರ ರಾಜ್ಯಕ್ಕೆ ಹೋಗದಂತೆ ಉಳಿಸಲು ಬಿಎಸ್ವೈ ಶ್ರಮಿಸುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಬಿಜೆಪಿ ಸಂಸದರು ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದರು.
ಬೀದರ್ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ವಿಚಾರದ ಬಗ್ಗೆ ಇಲ್ಲಿವರೆಗೆ ಯಾವುದೆ ಪ್ರಸ್ತಾವನೆ ಬಂದಿಲ್ಲ, ಕರ್ನಾಟಕದಿಂದ ಸ್ಪರ್ಧಿಸುವುದಾದರೆ ಸ್ವಾಗತ ಎಂದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
