ನಾಲ್ಕು ವರ್ಷದಲ್ಲಿ 9 ಕೋಟಿ ಶೌಚಗೃಹ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ

Featured, ದೇಶ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಮೂಲಕ ನಾಲ್ಕು ವರ್ಷದಲ್ಲಿ 9 ಕೋಟಿ ಶೌಚಗೃಹ ನಿರ್ಮಾಣವಾಗಿದೆ. 4.5 ಲಕ್ಷ ಹಳ್ಳಿಗಳು ಬಯಲುಶೌಚ ಸಮಸ್ಯೆಯಿಂದ ಮುಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆಯೋಜಿಸಿದ್ದ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಮಾತನಾಡಿ, ಸ್ವಚ್ಛತೆಯಿಂದ ಆರೋಗ್ಯಕರ ಭಾರತ ನಿರ್ಮಾಣ ಸಾಧ್ಯವಾಗುವುದರ ಜತೆ ಭಾರತದ ಆರ್ಥಿಕ ಅಭಿವೃದ್ಧಿ ಸಾಧ್ಯ. ಶೌಚಗೃಹ ಹೆಚ್ಚಳದಿಂದ ಇನ್ನೂ ಹೆಚ್ಚಿನ ಸ್ವಚ್ಛತೆ ಸಾಧ್ಯವಾಗುತ್ತದೆ ಎಂದರು.

ಗಾಂಧಿ ಕನಸು ನನಸಾಗಿಸುವುದೇ ನಮ್ಮ ಆದ್ಯತೆ. ಸ್ವಚ್ಛತೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದು ಅಗತ್ಯ. ಪ್ರವಾಸಿತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ಸಿಗಬೇಕು ಎಂದರು.

ಸ್ವಚ್ಛತಾ ಆಂದೋಲದ ಮೂಲಕವೇ ಇಚ್ಟು ಶೌಚಗೃಹ ನಿರ್ಮಾಣ ಸಾಧ್ಯವಾಗಿದೆ. ಈಗ ಅನೈರ್ಮಲ್ಯದಿಂದ ದೇಶದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಹಾಗಾಗಿ ಸ್ವಚ್ಛ ಭಾರತ ಪರಿಣಾಮಕಾರಿ ಆಂದೋಲನವಾಗಬೇಕು. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ‘ಸ್ವಚ್ಛತೆಯೇ ಭಾರತ್’ (Swachchata Hi Bharath) ಅಭಿಯಾನಕ್ಕೆ ಚಾಲನೆ ನೀಡಿದರು. ಸಂವಾದದಲ್ಲಿ ಬಾಲಿವುಡ್​ ನಟ ಅಮಿತಾಬ್ ಬಚ್ಚನ್​​​, ಉದ್ಯಮಿ ರತನ್​ ಟಾಟಾ ಕೂಡ ಪಾಲ್ಗೊಂಡಿದ್ದರು.

ಅಮಿತಾಬ್​ ಪ್ರಶಂಸೆ 
ಪ್ರಧಾನಿ ಮೋದಿ ಅವರ ಸ್ವಚ್ಛತಾ ಆಂದೋಲಕ್ಕೆ ಅಮಿತಾಬ್ ಪ್ರಶಂಸೆ ವ್ಯಕ್ತಪಡಿಸಿದ್ದು, ಸ್ವಚ್ಛತೆಗಾಗಿ ನೀವೇನೇ ಹೇಳಿದರೂ ಮಾಡಲು ಸಿದ್ಧ ಎಂದು ಭರವಸೆ ನೀಡಿದ್ದಾರೆ.

ಸ್ವಚ್ಛತಾ ಅಭಿಯಾನಕ್ಕೆ ಯೋಧರ ಸಾಥ್
ಯೋಧರ ವಿಷಯದಲ್ಲಿ ನಾವು ಏನೇ ಹೇಳಿದರೂ ಕಡಿಮೆ ಎಂದ ಪ್ರಧಾನಿ, ಭಾರತವನ್ನು ಸಂಕಷ್ಟದಿಂದ ಮುಕ್ತಿಗೊಳಿಸಲು ಹೋರಾಟ ಮಾಡುತ್ತಿದ್ದೀರ. ನೀವು ಯಾವಾಗಲೂ ದೇಶದ ಒಳಿತಿಗಾಗಿ ಹೋರಾಡುತ್ತೀರಿ. ಸ್ವಚ್ಛತಾ ಆಂದೋಲನದಲ್ಲೂ ನೀವು ಸಾಥ್ ನೀಡಿದ್ದೀರಿ. ನಿಮ್ಮ ಕಾರ್ಯವನ್ನು ನೋಡಲು ನಾನು ಬರುತ್ತೇನೆ ಎಂದರು.