ಪಡಿತರ, ಪಿಂಚಣಿಗಾಗಿ ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯವಲ್ಲ: ಸರಕಾರದಿಂದ ಸ್ಪಷ್ಟನೆ -Vishwanews24
ಪಡಿತರ, ಪಿಂಚಣಿಗಾಗಿ ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯವಲ್ಲ: ಸರಕಾರದಿಂದ ಸ್ಪಷ್ಟನೆ
ಸರಕಾರ ಆ ರೀತಿಯ ಯಾವುದೇ ನಿರ್ಬಂಧ ವಿಧಿಸಿಲ್ಲ..
ಬೆಂಗಳೂರು: ಕೋವಿಡ್ ಲಸಿಕೆ ಪಡೆಯದವರಿಗೆ ಪಡಿತರವಿಲ್ಲ ಎಂಬುದಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂಬ ಮಾತುಗಳಿಂದ ಗೊಂದಲ ಸೃಷ್ಟಿಯಾದ ಬೆನ್ನಲ್ಲೇ ಎಚ್ಚೆತ್ತ ಸರಕಾರ ಆ ರೀತಿಯ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್ ಲಸಿಕೆ ಪಡೆಯುವುದನ್ನು ಸರಕಾರದಿಂದ ನೀಡಲಾಗುವ ಪಡಿತರ , ಪಿಂಚಣಿಯಂತಹ ಯಾವುದೇ ಕಾರ್ಯಕ್ರಮ, ಯೋಜನೆಗೆ ಜೋಡಿಸಿಲ್ಲ.
ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಜನರಿಗೆ ಯಾವುದೇ ನಿಬಂಧನೆ ಹೇರದೆ ಜಾಗೃತಿ ಮೂಡಿಸುವ ಅಭಿಯಾನದ ಮುಲಕ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾಆರೋಗ್ಯಾಧಿಕಾರಿಗಳು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಒಂದೊಮ್ಮೆ ಲಸಿಕಾ ಕಾರ್ಯಕ್ರಮವನ್ನು ಯಾವುದೇ ಕಾರ್ಯಕ್ರಮ/ ಯೋಜನೆಗೆ ತಪ್ಪಾಗಿ ಜೋಡಿಸಿದ್ದರೆ ತಕ್ಷಣ ಕೈಬಿಡಬೇಕು ಎಂದು ಸೂಚನೆ ನೀಡಿದ್ದಾರೆ.
