ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್ ; ಸ್ಥಳೀಯರು, ಮೀನುಗಾರರಲ್ಲಿ ಆತಂಕ – vishwanews24
ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್..
ಸ್ಥಳೀಯರು ಹಾಗೂ ಮೀನುಗಾರರಲ್ಲಿ ಆತಂಕ ..
ಟಗ್ ಶೀಘ್ರ ತೆರವಿಗೆ ಆಗ್ರಹ : ಮೀನುಗಾರ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ
ಉಡುಪಿ: ಐದು ವರ್ಷಗಳ ಹಿಂದೆ ತೌಕ್ತೆ ಚಂಡಮಾರುತದ ವೇಳೆ ಪಡುಬಿದ್ರಿ ಕಡಿಪಟ್ಣ ಕಡಲತೀರಕ್ಕೆ ಬಂದು ಸಿಲುಕಿದ್ದ ‘ಅಲಯನ್ಸ್’ ಟಗ್ ಇಂದಿಗೂ ಸಂಪೂರ್ಣವಾಗಿ ತೆರವಾಗದೆ ಉಳಿದಿರುವುದು ಸ್ಥಳೀಯರು ಹಾಗೂ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.
2021ರ ಮೇ 15ರಂದು ತೌಕ್ತೆ ಚಂಡಮಾರುತದ ವೇಳೆ ಮಂಗಳೂರು ಸಮುದ್ರ ಭಾಗದಲ್ಲಿ ಅಪಘಾತಕ್ಕೀಡಾದ ಟಗ್, ಬಳಿಕ ಅಲೆಗಳ ಅಬ್ಬರಕ್ಕೆ ಪಡುಬಿದ್ರಿ ಕಡಲತೀರಕ್ಕೆ ಬಂದು ಸಿಲುಕಿತ್ತು. ಟಗ್ನಲ್ಲಿ ಎಂಟು ಮಂದಿ ಸಿಬ್ಬಂದಿಯಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು.ಮೂವರು ಬದುಕುಳಿದರೆ, ಇಬ್ಬರು ನಾಪತ್ತೆಯಾಗಿದ್ದರು.
ಕಾಪು: ಗೂಡ್ಸ್ ವಾಹನದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ವಿಡಿಯೋ ವೈರಲ್ ; ಪ್ರಕರಣ ದಾಖಲು, ವಾಹನ ವಶಕ್ಕೆ – vishwanews24
ತೆರವು ಕಾರ್ಯಕ್ಕೆ ಇನ್ನೂ ಮುಕ್ತಿ ಇಲ್ಲಅಲಯನ್ಸ್ ಟಗ್ Underwater Services Company Limitedಗೆ ಸೇರಿದ್ದು, MRPLನ ಸಮುದ್ರದಲ್ಲಿರುವ Single Point Mooring (SPM) ಕಾರ್ಯಾಚರಣೆಗೆ ಗುತ್ತಿಗೆ ಆಧಾರದ ಮೇಲೆ ಸೇವೆ ನೀಡುತ್ತಿತ್ತು. ದುರಂತದ ಬಳಿಕ ಟಗ್ ತೆರವಿಗೆ ಹಲವು ಪ್ರಯತ್ನ ನಡೆದರೂ ಅಗತ್ಯ ಅನುಮತಿ ಹಾಗೂ ಕ್ಲಿಯರೆನ್ಸ್ಗಳ ಕಾರಣದಿಂದ ಕಾರ್ಯ ವಿಳಂಬವಾಗಿದೆ.
2022ರಲ್ಲಿ ಸ್ಕ್ರ್ಯಾಪ್ ಮಾಡಲು ಟೆಂಡರ್ ಕರೆದಿದ್ದರೂ ಸೂಕ್ತ ಬಿಡ್ಡರ್ ಸಿಗದ ಕಾರಣ ತೆರವು ಕಾರ್ಯ ಮುಂದುವರಿದಿರಲಿಲ್ಲ.
ಮೀನುಗಾರಿಕೆಗೂ ಅಡ್ಡಿ: ಪ್ರವಾಸಿಗರಿಗೆ ಅಪಾಯಟಗ್ನ ಅವಶೇಷಗಳಿಂದ ಮೀನುಗಾರಿಕೆ ನಡೆಸುವಾಗ ಸಮಸ್ಯೆಯಾಗುತ್ತಿದೆ ಎಂಬುದು ಸ್ಥಳೀಯ ಮೀನುಗಾರರ ಆರೋಪ. ಟಗ್ ತೆರವು ವಿಳಂಬದ ವಿರುದ್ಧ ಕಡಿಪಟ್ಣ ಮೊಗವೀರ ಸಭಾ ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಶೀಘ್ರ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಮೀನುಗಾರ ಮುಖಂಡರು ಎಚ್ಚರಿಸಿದ್ದಾರೆ.
ಇನ್ನೊಂದೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಟಗ್ ಪ್ರವಾಸಿಗರಿಗೆ ‘ಸೆಲ್ಫಿ ಸ್ಪಾಟ್’ ಆಗಿರುವುದು ಆತಂಕ ಮೂಡಿಸಿದೆ. ಟಗ್ನ ಅವಶೇಷಗಳ ಮೇಲೆ ಹತ್ತುವುದು ಅಥವಾ ಅಲೆಗಳ ನಡುವೆ ಅದರ ಸಮೀಪ ತೆರಳುವುದು ಅಪಾಯಕಾರಿಯಾಗಿದ್ದು, ತೆರವುಗೊಳ್ಳುವವರೆಗೆ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.
ಬ್ಲೂ ಫ್ಲ್ಯಾಗ್ ಕಡಲತೀರದಲ್ಲೇ ಅವಶೇಷ ಪಡುಬಿದ್ರಿ ಕಡಲತೀರವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಸುರಕ್ಷತೆ, ಸ್ವಚ್ಛತೆ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ‘ಬ್ಲೂ ಫ್ಲ್ಯಾಗ್’ ಮಾನ್ಯತೆ ಪಡೆದಿದೆ. ಇಂತಹ ಕಡಲತೀರದಲ್ಲೇ ಐದು ವರ್ಷಗಳಿಂದ ಟಗ್ನ ಅವಶೇಷ ಉಳಿದಿರುವುದು ಪ್ರವಾಸಿಗರು ಹಾಗೂ ಮೀನುಗಾರರ ಸುರಕ್ಷತೆ ಕುರಿತು ಪ್ರಶ್ನೆ ಮೂಡಿಸಿದೆ.
