ಪೌರತ್ವ ಬೆಂಬಲಿಸಿ ಬಿಜೆಪಿ ಮತ್ತು ಆರ್.ಎಸ್.ಎಸ್ ಶಕ್ತಿ ಪ್ರದರ್ಶನ, ಕೇಸರಿಮಯವಾದ ಕಡಲನಗರಿ -Vishwanews24
ಮಂಗಳೂರು: ಪೌರತ್ವ ವಿಚಾರ ಮಂಗಳೂರಿನಲ್ಲಿ ಮತ್ತೆ ಕಿಚ್ಚು ಹಚ್ಚಿದೆ. ಪೌರತ್ವ ಬೆಂಬಲಿಸಿ ಕಡಲನಗರಿಯಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಖಾಡಕ್ಕೆ ಇಳಿದಿದ್ದರು. ಸಂಘಟನೆಗಳು ಒಟ್ಟಾಗಿ ನಗರದಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಜನ ಜಾಗೃತಿಯ ಕಹಳೆ ಮೊಳಗಿಸಿದ್ದು ಮಾತ್ರವಲ್ಲದೇ, ಕೇಂದ್ರದ ಪರ ಜನ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

ಮೈದಾನದ ತುಂಬಾ ಮೋದಿ ಸೈನಿಕರಂತೆ ಸೇರಿದ ರಣೋತ್ಸಾಹದ ಜನ ಅಬ್ಬರಿಸಿ ಬೊಬ್ಬಿಡುತ್ತಾ ಮೋದಿ ಪರ ಕೂಗು ಮೊಳಗಿಸುತ್ತಾ ಒಗ್ಗಟ್ಟಿನ ಕಹಳೆ ಊದಿದರು. ಜನಜಾಗೃತಿಯ ಕಿಚ್ಚಿಗೆ ಕಡಲನಗರಿ ಒಂದಾದ್ರೆ, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು. ಪೌರತ್ವ ಕಾಯಿದೆ ಬೆಂಬಲಿಸಿ ನಡೆದ ಸಮಾವೇಶಕ್ಕೆ ಕಡಲನಗರಿ ಸ್ತಬ್ಧವಾಗಿ ಹೋಯ್ತು. ಹೌದು. ಪೌರತ್ವ ಕಾಯಿದೆ ಪರವಾದ ಕೂಗು ಮಂಗಳೂರಿನಲ್ಲಿ ಮಾರ್ದನಿಸಿತ್ತು. ಪೌರತ್ವ ವಿರೋಧಿಸಿ ಪ್ರತಿಭಟನೆಗಳನ್ನು ನೋಡಿದ್ದ ಮಂಗಳೂರು, ಪೌರತ್ವ ಪರವಾದ ಶಕ್ತಿ ಪ್ರದರ್ಶನ ಕ್ಕೆ ಸಾಕ್ಷಿಯಾಯಿತು.
ಪೌರತ್ವ ಕಾಯ್ದೆ ವಿಚಾರದಲ್ಲಿ ಹೊತ್ತಿ ಉರಿದು ಗೋಲಿಬಾರಿನಲ್ಲಿ ನಲುಗಿ ಹೋಗಿದ್ದ ಮಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವರ ನೇತೃತ್ವದಲ್ಲಿ ಈ ಜನಜಾಗೃತಿ ಸಮಾವೇಶ ನಡೆದಿತ್ತು. ಮಂಗಳೂರು ನಗರ ಹೊರವಲಯದ ಬಂಗ್ರ ಕುಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದ ತುಂಬೆಲ್ಲಾ ಕೇಸರಿ ಕಲಿಗಳು ಒಂದಾಗಿ ಮೋದಿ ಪರ ನಾವಿದ್ದೇವೆ ಅಂತಾ ಸಾಬೀತುಪಡಿಸಿದರು.
ಉರಿಬಿಸಿಲಿನ್ನೂ ಲೆಕ್ಕಿಸದೆ ಸೇರಿದ್ದ ಜನರನ್ನೂ ಸಮಾವೇಶಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುಚ್ಚೆಬ್ಬಿಸಿದರು. ಪೌರತ್ವ ಕಾಯಿದೆ ಪರವಾದ ಜನಜಾಗೃತಿ ಮೊಳಗಿಸಿದರು. ಇದೇ ವೇಳೆ ದೇಶದೊಳಗಿರುವ ಅಕ್ರಮ ನುಸುಳುಕೋರರನ್ನು ಓಡಿಸದೇ ಬಿಡಲ್ಲ ಅಂತಾ ರಾಜನಾಥ್ ಸಿಂಗ್ ಗುಡುಗಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದರು. ಸುಮಾರು 800 ಬಸ್ಸುಗಳಲ್ಲಿ ಜನ ಆಗಮಿಸಿದ್ದರು. ಮೈದಾನದಲ್ಲಿ 5 ಸಾವಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ-ಮಂಗಳೂರು ರಸ್ತೆ ಸಂಚಾರದಲ್ಲೂ ಬದಲಾವಣೆ ಮಾಡಲಾಗಿತ್ತು. ಪೌರತ್ವ ವಿರೋಧವನ್ನು ಮಾತ್ರ ಕಂಡಿದ್ದ ಮಂಗಳೂರಿನ ನೆಲ ಇದೇ ಮೊದಲ ಬಾರಿಗೆ ಪೌರತ್ವ ಪರವಾದ ಬೃಹತ್ ಸಮಾವೇಶವನ್ನು ಕಂಡಿತು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿವಿ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರಾವಳಿಯ ಕೇಸರಿ ಸಂಸದರು, ಶಾಸಕರು ಪೌರತ್ವದ ಪರವಾದ ಕಹಳೆ ಮೊಳಗಿಸಿದರು.
