ಬಿಜೆಪಿಯವರು ನಿಜವಾದ ಟೆರರಿಸ್ಟ್‌ಗಳು : ಮತ್ತೊಮ್ಮೆ ವಿವಾದಕ್ಕೊಳಗಾದ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು : ಬಿಜೆಪಿಯವರು ನಿಜವಾದ ಟೆರರಿಸ್ಟ್‌ಗಳು, ಸನಾತನ ಧರ್ಮದ ಹೆಸರಿನಲ್ಲಿ ಉಗ್ರವಾದ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ-ಆರ್‌ಎಸ್‌ಎಸ್‌ನವರು ಬಲಪಂಥೀಯ ಹೆಸರಿನಲ್ಲಿ ಉಗ್ರವಾದ ಮಾಡುವವರು. ಪ್ರಗತಿಪರ ಚಿಂತನೆ ಇಲ್ಲದವರು. ಗೌರಿ ಲಂಕೇಶ್ ಹತ್ಯೆಯ ಹಿಂದೆ ಯಾರಿದ್ದಾರೆ ಅಂತಾ ಗೊತ್ತಾಗಿದೆ ಎಂದರು.
ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಹತ್ಯೆ ಮಾಡಿದವರ ಬಗ್ಗೆ ನಮ್ಮ ಪೊಲೀಸರು ಎಳೆಎಳೆಯಾಗಿ ಬಿಚ್ಚಿಡ್ತಿದ್ದಾರೆ. ನಾಲ್ಕು ವರ್ಷಗಳಿಂದ ಕಂಡು ಹಿಡಿಯದಿದ್ದ ಕೇಸ್ ಬಗ್ಗೆ ಮಾಹಿತಿ ಈಗ ಸಿಕ್ಕಿದೆ. ಇದರ ಹಿಂದಿರುವವರು ಯಾರು ಅನ್ನೋದು ಜಗತ್ತಿಗೇ ಗೊತ್ತಾಗಿದೆ. ಗೌರಿ ಹಂತಕರನ್ನು ಹಿಡಿಯುವ ಕೆಲಸ ನಮ್ಮ ಸರ್ಕಾರ ಮಾಡಿತು. ಆದ್ರೆ ಮಹಾರಾಷ್ಟ್ರ ಸರ್ಕಾರ ಪನ್ಸಾರೆ ಮತ್ತು ದಾಬೋಲ್ಕರ್ ಕೊಲೆ ಮಾಡಿದವರ ಬಗ್ಗೆ ಚಕಾರ ಎತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿಯವರೂ ಸಹ ಭಯೋತ್ಪಾದಕರಷ್ಟೇ ಕ್ರೂರ. ಅದೇ ಒಬ್ಬ ಮುಸ್ಲಿಂ ಇಂತಹ ಕೃತ್ಯ ಮಾಡಿದ್ರೆ ಸುಮ್ಮನೆ ಬಿಡುತ್ತಿದ್ರಾ? ಐಸಿಸ್ ಉಗ್ರ ಸಂಘಟನೆ ಪಾತ್ರ ಇದ್ದಿದ್ರೆ ಪ್ರತಿ ದಿನ ಚರ್ಚೆ ಆಗುತ್ತಿತ್ತು. ವಾಜಪೇಯಿ ಅಂತ್ಯ ಸಂಸ್ಕಾರಕ್ಕೆ ಹೋದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಯಾರೂ ಇವರ ವಿರುದ್ಧ ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡ್ತಾರೆ. ಇವರನ್ನು ಟೆರರಿಸ್ಟ್ ಅನ್ನದೇ ಬೇರೆ ದಾರಿಯಿಲ್ಲ ಎಂದು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ದಿನೇಶ್ ಗುಂಡುರಾವ್ ಗಂಭೀರ ಆರೋಪ ಮಾಡಿದರು.
