ಬಿಜೆಪಿಯ ಇಂತಹ ಕುತಂತ್ರಕ್ಕೆ ಯಾವ ಕಾಂಗ್ರೆಸ್ ನಾಯಕರೂ ಎದೆಗುಂದುವುದಿಲ್ಲ : ಮಲ್ಲಿಕಾರ್ಜುನ ಖರ್ಗೆ -Vishwanews24
ಬೆಂಗಳೂರು: ಬಿಜೆಪಿ ತನ್ನ ದುರುದ್ದೇಶಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಈ ರೀತಿ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಮಾತ್ರಕ್ಕೆ ಪಕ್ಷವನ್ನು ಮುಗಿಸಬಹುದೆಂದು ಭಾವಿಸಿದ್ದರೆ, ಅದು ಅವರ ತಪ್ಪು ಕಲ್ಪನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಷಡ್ಯಂತ್ರದ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಬಿಜೆಪಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಇಂತಹ ಕುತಂತ್ರಕ್ಕೆ ಯಾವ ಕಾಂಗ್ರೆಸ್ ನಾಯಕರೂ ಎದೆಗುಂದುವುದಿಲ್ಲ ಎಂದಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ನೀಡಲಾಗಿರುವ ಎಲ್ಲಾ ಸಮನ್ಸ್ ಹಾಗೂ ನೋಟೀಸ್ ಗಳಿಗೂ ಸೂಕ್ತವಾಗಿ ಸ್ಪಂದಿಸಿರುವ ಶಿವಕುಮಾರ್ ಅವರನ್ನು ಉದ್ದೇಶ ಪೂರ್ವಕವಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುಳ್ಳು ಕಾರಣ ನೀಡಿ ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಡಿಕೆಶಿ ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
