ಬಿಲ್ಕಿಸ್ ಬಾನೊ ಪ್ರಕರಣ : ಎಲ್ಲಾ 11 ಅಪರಾಧಿಗಳು ಗುಜರಾತ್ ಜೈಲಿನಲ್ಲಿ ಶರಣಾಗತಿ – vishwanews24
ಬಿಲ್ಕಿಸ್ ಬಾನೊ ಪ್ರಕರಣ : ಎಲ್ಲಾ 11 ಅಪರಾಧಿಗಳು ಗುಜರಾತ್ ಜೈಲಿನಲ್ಲಿ ಶರಣಾಗತಿ
ಗಾಂಧಿನಗರ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್ ಜೈಲಿನಲ್ಲಿ ಶರಣಾಗಿದ್ದಾರೆ. ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಕಾರಾಗೃಹದಲ್ಲಿ ಭಾನುವಾರ ರಾತ್ರಿ ಶರಣಾಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ತಿಳಿಸಿದ್ದಾರೆ.
ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 11 ಮಂದಿಯನ್ನು ಗುಜರಾತ್ ಸರ್ಕಾರವು 2022ರ ಸ್ವಾತಂತ್ರ್ಯ ದಿನದಂದು ಬಳಕೆಯಲ್ಲಿಲ್ಲದ ಕಾನೂನಿನ ಆಧಾರದ ಮೇಲೆ ಬಿಡುಗಡೆ ಮಾಡಿತ್ತು.
ಬಾನೊ ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಅವರ ಬಿಡುಗಡೆಯ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅಪರಾಧಿಗಳ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು. ಅಲ್ಲದೇ ಶರಣಾಗತಿಗೆ ಕಾಲಾವಕಾಶ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಭಾನುವಾರದ (ಜ.21) ಒಳಗೆ ಶರಣಾಗುವಂತೆ ಕೋರ್ಟ್ ಸೂಚನೆ ನೀಡಿತ್ತು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿ, ಕುಟುಂಬದವರ ವಿವಾಹ, ಪೋಷಕರ ಜವಾಬ್ದಾರಿ ಕಾರಣ ನೀಡಿ ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ಪರಿಗಣಿಸಿಲ್ಲ. ಪ್ರಕರಣದ 11 ಅಪರಾಧಿಗಳು ಅಧಿಕಾರಿಗಳ ಮುಂದೆ ಶರಣಾಗುವಂತೆ ತಿಳಿಸಿದೆ ಎಂದು ಸೂಚಿಸಿತ್ತು.
