ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ – vishwanews24

Featured, ರಾಜ್ಯ ನ್ಯೂಸ್

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ ;  ಪ್ರಕರಣಕ್ಕೆ ಮಹತ್ವದ ತಿರುವು

ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು ಸುಮಾರು ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ತನಿಷ್ಕಾ ಮತ್ತು ತೇಜಸ್ವಿನಿ ಎಂಬ ಯುವತಿಯರನ್ನು ಕೊನೆಗೂ ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದು, ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ತನಿಷ್ಕಾ ದ್ವಿತೀಯ ಪಿಯುಸಿ ಹಾಗೂ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಕಳೆದ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಯುವತಿಯರು ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಷ್ಕಾ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ತನಿಖೆಯ ಪ್ರಗತಿ ಹಾಗೂ ಯುವತಿಯರ ಪತ್ತೆ ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಹೈಕೋರ್ಟ್ ನಿರ್ದೇಶನದಂತೆ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೆತ್ತಿಕೊಂಡು ಕಳೆದ ಮೂರು ತಿಂಗಳಿಂದ ಯುವತಿಯರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: 

ಉಡುಪಿ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯ ; ಸೆಪ್ಟೆಂಬರ್ 30 ಕೊನೆಯ ದಿನ – vishwanews24

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಕ್ಕಿದ್ದ ಸುಳಿವು
ಇಬ್ಬರೂ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಐಡಿ ಅಧಿಕಾರಿಗಳಿಗೆ ತನಿಖೆ ವೇಳೆ ದೊರೆತಿತ್ತು. ಅಲ್ಲಿ ಇಬ್ಬರೂ ಒಂದು ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ, ಮಗುವಿನ ತಾಯಿ ಇಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋ ಹಾಗೂ ಲಭ್ಯವಾದ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಸಿದರೂ, ಬಳಿಕ ಯುವತಿಯರ ಕುರಿತು ಯಾವುದೇ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ.

ತನಿಖೆ ಮುಂದುವರಿದ ಸಂದರ್ಭದಲ್ಲಿ, ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಬಳಸಲು ಮುಂದಾಗಿದ್ದಳು. ಈ ವೇಳೆ ಆಧಾರ್ ಸಂಖ್ಯೆಯ ಬಳಕೆಯ ಕುರಿತು ಸರ್ವಿಸ್ ಪ್ರೊವೈಡರ್‌ನಿಂದ ಸಿಐಡಿಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇಬ್ಬರೂ ಯುವತಿಯರು ಪತ್ತೆಯಾಗಿದ್ದಾರೆ.

ಇದನ್ನೂ ಓದಿ: 

ಬೆಂಗಳೂರು: ಆಹಾರ ಮತ್ತು ದಿನಬಳಕೆ ವಸ್ತುಗಳ ಮಾರಾಟ ಅಂಗಡಿಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ – vishwanews24

 

ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಯುವಕನ ಕುಟುಂಬದ ವಿಚಾರಣೆಯ ಸಂದರ್ಭದಲ್ಲಿ ತನಿಷ್ಕಾ ತಾನು ಹಾಗೂ ತೇಜಸ್ವಿನಿ ಸಹೋದರಿಯರು, ತಮ್ಮ ಕುಟುಂಬದಲ್ಲಿ ತಂದೆ-ತಾಯಿ ಸೇರಿದಂತೆ ಯಾರೂ ಇಲ್ಲ ಎಂದು ಹೇಳಿದ್ದಳು. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಂತರ ತನಿಷ್ಕಾ ಆ ಯುವಕನನ್ನು ಮದುವೆಯಾಗಿದ್ದಾಳೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ತೇಜಸ್ವಿನಿಯನ್ನು ತನ್ನ ತಂಗಿ ಎಂದು ಪರಿಚಯಿಸಿ ತಮ್ಮೊಂದಿಗೇ ಇರಿಸಿಕೊಂಡಿದ್ದಳು ಎಂಬುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಮನೆಯಿಂದ ಕಾಲೇಜಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಇದೀಗ ಪತ್ತೆಯಾಗಿದ್ದಾರೆ. ತನಿಷ್ಕಾ ಮದುವೆಯಾಗಿದ್ದು, ಸದ್ಯ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: 

ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ : ದೇವಿಪ್ರಸಾದ್ ಶೆಟ್ಟಿ ಬೆಳಪು – vishwanews24

ಎಂಟು ತಿಂಗಳ ಬಳಿಕ ಇಬ್ಬರೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಯುವತಿಯರು ಈ ಅವಧಿಯಲ್ಲಿ ಎಲ್ಲಿದ್ದರು, ಅವರ ನಾಪತ್ತೆಯ ಹಿಂದಿನ ಸಂಪೂರ್ಣ ಹಿನ್ನೆಲೆ ಏನು ಎಂಬುದರ ಕುರಿತು ಸಿಐಡಿ ಅಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply