ಬೆಳ್ತಂಗಡಿ: ಸುಮಂತ್ ಸಾವಿನ ಪ್ರಕರಣ; ಬ್ರೈನ್ ಮ್ಯಾಪಿಂಗ್, ನಾರ್ಕೋ ಪರೀಕ್ಷೆ ಆರಂಭ – vishwanews24
ಬೆಳ್ತಂಗಡಿ: ಸುಮಂತ್ ಸಾವಿನ ಪ್ರಕರಣ; ಬ್ರೈನ್ ಮ್ಯಾಪಿಂಗ್, ನಾರ್ಕೋ ಪರೀಕ್ಷೆ ಆರಂಭ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯ ನಿವಾಸಿ ಸುಮಂತ್(15) ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳ ಪ್ರಕ್ರಿಯೆ ಆರಂಭವಾಗಿದೆ. ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣದ ಮೊದಲ ಹಂತದ ತನಿಖೆಗಾಗಿ ಸುಮಂತ್ ಅವರ ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಉಡುಪಿ: ನ್ಯಾಯಾಲಯಕ್ಕೆ ಹಾಜರಾಗದೆ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ – vishwanews24
ಆಗಸ್ಟ್ 10ರಂದು ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಸುಮಂತ್ ಅವರ ಸಹೋದರ ಸುದರ್ಶನ ಅವರನ್ನು ಮಧ್ಯಾಹ್ನದಿಂದ ಸಂಜೆವರೆಗೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.
ಆಗಸ್ಟ್ 11ರಂದು ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಐವರು ನೀಡಿರುವ ಉತ್ತರಗಳನ್ನು ಪ್ರಕರಣದ ತನಿಖೆಯ ವೇಳೆ ಸಂಗ್ರಹಿಸಿರುವ ಮಾಹಿತಿಯೊಂದಿಗೆ ತಜ್ಞರು ಇದೀಗ ಹೋಲಿಕೆ ಮಾಡಿ ವಿಶ್ಲೇಷಿಸುತ್ತಿದ್ದಾರೆ.
ಸಂಬಂಧಪಟ್ಟವರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯ ಮುಂದಿನ ಹಂತಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತರನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಸುಮಂತ್ ಅವರು ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದರು. 2026ರ ಜನವರಿ 14ರಂದು ಧನುಪೂಜೆಗೆ ತೆರಳುವ ವೇಳೆ ಸಮೀಪದ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬೆಳಗ್ಗೆ ನಿಗೂಢವಾಗಿ ಮೃತಪಟ್ಟಿದ್ದರು.
ಸುಮಂತ್ ಅವರ ಸಾವು ಸಹಜವಲ್ಲ ಹಾಗೂ ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿರಬಹುದು ಎಂಬ ಅನುಮಾನಗಳು ಆರಂಭದಿಂದಲೇ ವ್ಯಕ್ತವಾಗಿದ್ದವು. ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ, ಪ್ರಕರಣದ ನಿಗೂಢತೆಗೆ ಈವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಪ್ರಕರಣದಲ್ಲಿ ನಿಖರವಾಗಿ ಏನಾಯಿತು ಎಂಬುದು ಇನ್ನೂ ಬಯಲಾಗಬೇಕಿದೆ.
