`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24
`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ
ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಆರ್‌ಜೆ ಮಿಟ್ಟೆ ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅಮೆರಿಕದ ಟೆಕ್ಸಾಸ್‌ನ ಬ್ರೌನ್ಸ್ವಿಲ್ಲೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಟನ ನಿಧನದ ಸುದ್ದಿಯನ್ನು ಅವರ ಪ್ರತಿನಿಧಿ ಖಚಿತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಟ, ಸಮಾಜಸೇವಕ ಹಾಗೂ ಅಂಗವಿಕಲರ ಹಕ್ಕುಗಳ ಪರವಾಗಿ ಧ್ವನಿ ಎತ್ತುತ್ತಿದ್ದ ಆರ್‌ಜೆ ಮಿಟ್ಟೆ ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರತಿನಿಧಿ ಸೀನ್ ರೀಲಿ, ಮಿಟ್ಟೆ ಅವರು ತಮ್ಮ ಅಭಿನಯದ ಜೊತೆಗೆ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
`ಬ್ರೇಕಿಂಗ್ ಬ್ಯಾಡ್’ ಮೂಲಕ ಖ್ಯಾತಿ:
2008ರಿಂದ 2013ರವರೆಗೆ ಅಮೆರಿಕದ ಎಎಂಸಿ ವಾಹಿನಿಯಲ್ಲಿ ಪ್ರಸಾರವಾದ `ಬ್ರೇಕಿಂಗ್ ಬ್ಯಾಡ್’ ಸರಣಿಯಲ್ಲಿ ಆರ್‌ಜೆ ಮಿಟ್ಟೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸರಣಿಯಲ್ಲಿ ಬ್ರಯಾನ್ ಕ್ರಾನ್ಸ್ಟನ್ ಮತ್ತು ಆರನ್ ಪಾಲ್ ಅವರಂತಹ ಕಲಾವಿದರೊಂದಿಗೆ ಅಭಿನಯಿಸಿದ್ದರು. ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ತಮ್ಮ ಸಹಜ ಅಭಿನಯದಿಂದ ಜನಪ್ರಿಯತೆ ಗಳಿಸಿದ್ದರು.
ಈ ಸರಣಿಯಲ್ಲಿ ವಾಲ್ಟರ್ ವೈಟ್ ಎಂಬ ರಸಾಯನಶಾಸ್ತ್ರ ಶಿಕ್ಷಕ ಕ್ಯಾನ್ಸರ್ ಪತ್ತೆಯಾದ ಬಳಿಕ ಕುಟುಂಬದ ಭವಿಷ್ಯಕ್ಕಾಗಿ ಅಪರಾಧ ಜಗತ್ತಿನತ್ತ ಹೆಜ್ಜೆ ಹಾಕುವ ಕಥೆ ಚಿತ್ರಿಸಲಾಗಿದೆ. ಈ ಕಥೆಯಲ್ಲಿ ವಾಲ್ಟರ್ ವೈಟ್‌ನ ಮಗನ ಪಾತ್ರದಲ್ಲಿ ಮಿಟ್ಟೆ ಕಾಣಿಸಿಕೊಂಡಿದ್ದರು. ತಂದೆಯ ಬದಲಾದ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಮಗನ ಪಾತ್ರವನ್ನು ಅವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು
