ಭಜರಂಗದಳ ನಿಷೇಧ – ಮುಸ್ಲಿಂ ಮೀಸಲಾತಿ ಮರುಜಾರಿ : ಕಾಂಗ್ರೆಸ್ ಪ್ರಣಾಳಿಕೆ’ ಬಿಡುಗಡೆ – Vishwanews24
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ – ಮುಸ್ಲಿಂ ಮೀಸಲಾತಿ ಮರುಜಾರಿ
ಸರ್ವಜನಾಂಗದ ಶಾಂತಿಯ ತೋಟ ಘೋಷ ವಾಕ್ಯದೊಂದಿಗೆ `ಕಾಂಗ್ರೆಸ್ ಪ್ರಣಾಳಿಕೆ’ ಬಿಡುಗಡೆ
ಬೆಂಗಳೂರು: ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಭಜರಂಗ ದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್,ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಸೇರಿ ಹಲವರು ಭಾಗಿಯಾಗಿದ್ದರು.
ಪ್ರಣಾಳಿಕೆಯಲ್ಲಿ ಏನಿದೆ?:
- ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್
- ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ
- ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ.
- ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು
- ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ.
- ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
- ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ
- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ
- ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
- ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ
- ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ
- ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
- ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
- ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ
- ನೀರಾವರಿಗಾಗಿ ಮುಂದಿನ 5 ವರ್ಷಗಳಲ್ಲಿ 1.50ಲಕ್ಷ ಕೋಟಿ ರೂ.
- ಕನಕಪುರದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
- ಬಿಬಿಎಂಪಿ ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ
- ಒಂದೇ ವೇದಿಕೆ ಅಡಿ ಸಾರಿಗೆ ವಿದ್ಯುತ್ ವಸತಿ ಒಳಚರಂಡಿ, ನೀರು ಸರಬರಾಜು ಸೌಕರ್ಯ
- ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ 1 ಗಂಟೆ ತನಕ ಬಸ್ ವ್ಯವಸ್ಥೆ
- NEP ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ
- ಸರ್ಕಾರದಿಂದಲೇ ಮನೆಗಳ ನಿರ್ಮಾಣ
- ಮಂಗಳಮುಖಿರಿಗಾಗಿ ಮಂಡಳಿ ಸ್ಥಾಪನೆ (100 ಕೋಟಿ ಅನುದಾನ)
- ಆಟೋ ಚಾಲಕರ ಮಂಡಳಿ ಹಾಗೂ ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ
- ಪತ್ರಕರ್ತರ ಕಲ್ಯಾಣ ನಿಧಿಗೆ 500 ಕೋಟಿ ರೂ ಮೀಸಲು (ಪತ್ರಕರ್ತರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ)
- SC-ST ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ದ.
- ಒಂದು ಬಾರಿಯ ನೆರವಿನ ರೂಪದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರ ಅನುದಾನ
- ಹಿರಿಯ ನಾಗರಿಕರಿಗೆ ಎರಡು ವರ್ಷಕ್ಕೊಮ್ಮೆ ರಾಜ್ಯದ 15 ದೇಶದ 10 ಪವಿತ್ರ ಸ್ಥಳಗಳಿಗೆ ಉಚಿತ ಪ್ರವಾಸ.
- ಕಾಶಿ, ಮಥುರ, ಕೈಲಾಸ, ಮಾನಸ ಸರೋವರ ಯಾತ್ರೆಯ ಸಬ್ಸಿಡಿ ಹೆಚ್ಚಳ
- ವಿಶೇಷ ಚೇತನರಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಾಲೆ ಸ್ಥಾಪನೆ.
- ಅಂಗವಿಕಲ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ.
- ಎಸ್.ಸಿ ಎಸ್.ಟಿ ಮೀಸಲಾತಿ ಸೇರಿದಂತೆ ಶೇ.50 ರಿಂದ ಶೇ.75ಕ್ಕೆ ಏರಿಕೆಗೆ ಸೂಕ್ತ ಕ್ರಮ (ಎಸ್.ಸಿ ಮೀಸಲಾತಿ ಶೇ.17ಕ್ಕೆ ಏರಿಕೆ, ಎಸ್.ಟಿ ಮೀಸಲಾತಿ ಶೇ. 7ಕ್ಕೆ ಏರಿಕೆ. ಅಲ್ಪ ಸಂಖ್ಯಾತರಿಗೆ ಶೇ.4 ರ ಮೀಸಲಾತಿ ಮರು ಸ್ಥಾಪನೆ, ಹಿಂದುಳಿದ ವರ್ಗಗಳ ಜನಗಣತಿ ವರದಿ ಅನುಷ್ಠಾನ)
