ಭಾರತದಲ್ಲಿ (100 ಬಿಲಿಯನ್ )7 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ-Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ರಾಷ್ಟ್ರ ನ್ಯೂಸ್

ನವದೆಹಲಿ: ಭಾರತದ ಬೆಳವಣಿಗೆ ಸಾಮರ್ಥ್ಯವನ್ನು ಪರಿಗಣಿಸಿ ವಿಶ್ವದ ಅತಿ ದೊಡ್ಡ ತೈಲ ರಫ್ತು ರಾಷ್ಟ್ರ ಸೌದಿ ಅರೇಬಿಯಾ ಭಾರತದ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ 100 ಬಿಲಿಯನ್ ಡಾಲರ್ (7 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸೌದಿ ಅರೇಬಿಯಾ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ, ಹೂಡಿಕೆ ಮಾಡಲು ಭಾರತ ಅತ್ಯಾಕರ್ಷಕ ಸ್ಥಳ. ಹೀಗಾಗಿ ತೈಲ, ಅನಿಲ, ಕೃಷಿ, ಖನಿಜ ಹಾಗೂ ಗಣಿಗಾರಿಕೆ ವಿಭಾಗದಲ್ಲಿ ಭಾರತದ ಜತೆ ದೀರ್ಘಕಾಲಿನ ಪಾಲುದಾರಿಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದೇವೆ. ಸೌದಿ ಅರೇಬಿಯಾದ ಅರಾಮ್ಕೊ ಹಾಗೂ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ಸಹಭಾಗಿತ್ವ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಇಂಧನ ಕ್ಷೇತ್ರದ ಸಂಬಂಧಗಳ ಕಾರ್ಯತಂತ್ರದ ಸ್ವರೂಪ ಪ್ರತಿಬಿಂಬಿಸುತ್ತದೆ. ತೈಲ ಪೂರೈಕೆ, ಮಾರುಕಟ್ಟೆ, ಪೆಟ್ರೋಕೆಮಿಕಲ್ಸ್ ಮೇಲೆ ಹೂಡಿಕೆ ಮಾಡುವುದು ಪ್ರಮುಖ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ತೈಲ ಪೂರೈಕೆ, ಮಾರ್ಕೆಟಿಂಗ್, ಪೆಟ್ರೋಕೆಮಿಕಲ್ಸ್ ಮತ್ತು ಲೂಬ್ರಿಕಂಟ್‌ಗಳಿಗೆ ಸಂಸ್ಕರಣೆ ಮಾಡುವುದರಿಂದ ಭಾರತದ ಮೌಲ್ಯ ಸರಪಳಿಯಲ್ಲಿ ಹೂಡಿಕೆ ಮಾಡುವುದು ಅರಾಮ್ಕೊದ ಜಾಗತಿಕ ಡೌನ್‌ಸ್ಟ್ರೀಮ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

2030ರ ವೇಳೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವ್ಯಾಪಾರದಲ್ಲಿ ಗಮನಾರ್ಹ ವಿಸ್ತರಣೆ ತರಲು ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ನಿರ್ಧರಿಸಿದ್ದಾರೆ. ಸೌದಿ ಅರೇಬಿಯಾದಿಂದ ಭಾರತದ ಶೇ. 17ಕ್ಕಿಂತ ಹೆಚ್ಚು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಶೇ.32ರಷ್ಟು ಎಲ್​ಪಿಜಿ ಅವಶ್ಯಕತೆಗಳನ್ನು ಪೂರೈಸುತ್ತಿದೆ.

ಭಾರತದ ಜತೆ ದ್ವಿಪಕ್ಷೀಯ ಸಹಭಾಗಿತ್ವ ಹಾಗೂ ಹೂಡಿಕೆ ಮಾಡಬಹುದಾದ ಸುಮಾರು 40 ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಇದರಿಂದ ಉಭಯ ದೇಶಗಳ ನಡುವೆ ಇರುವ 34 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಮತ್ತಷ್ಟು ವೃದ್ಧಿಸಲಿದೆ. ಭಾರತವೂ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಿದ್ದು, ಇದು ಉಭಯ ದೇಶಗಳ ನಡುವಿನ ಸಹಭಾಗಿತ್ವ ಮತ್ತು ಸಹಕಾರವನ್ನು ತೋರಿಸುತ್ತದೆ. ಕಳೆದ ಜಿ20 ಶೃಂಗ ಸಭೆಯಲ್ಲಿ ವಿಶ್ವ ಬ್ಯಾಂಕ್ ಸೌದಿಯನ್ನು ಜಗತ್ತಿನ 4ನೇ ಅತಿ ದೊಡ್ಡ ಸುಧಾರಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ.