ಭಾರತದ ಪ್ರಧಾನಿ ಮೋದಿ ಅತ್ಯಂತ ಭರವಸೆಯ ಗೆಳೆಯ : ಜಪಾನ್‌ ಪ್ರಧಾನಿ

Featured, ದೇಶ

ಯಮನಶಿ(ಜಪಾನ್‌)/: “ಭಾರತದ ಪ್ರಧಾನಿ ಮೋದಿ ನನ್ನ ಅತ್ಯಂತ ಭರವಸೆಯ ಗೆಳೆಯ…’ ಇದು ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಮೋದಿ ಕುರಿತಂತೆ ಮಾಡಿರುವ ಗುಣಗಾನ. ಭಾರತವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿರುವ ಅಬೆ, ತಮ್ಮ ಅಜ್ಜನ ಕಾಲದಿಂದಲೂ ಈ ದೇಶ ನನ್ನ ನೆಚ್ಚಿನದ್ದಾಗಿದೆ ಎಂದಿದ್ದಾರೆ. 1957ರಲ್ಲಿ ಅಬೆ ಅವರ ತಾತ ನಬುಸುಕೆ ಕಿಶಿ ಅವರು ಜಪಾನ್‌ ಪ್ರಧಾನಿಯಾಗಿದ್ದ ವೇಳೆ ಭಾರತಕ್ಕೆ ಬಂದಿದ್ದರು. ಆಗ ಪ್ರಧಾನಿಯಾಗಿದ್ದ ಜವಾಹರ್‌ ಲಾಲ್‌ ನೆಹರೂ ಅವರು ತೋರಿದ್ದ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಭಾರತದ ಪತ್ರಿಕೆಗಳಿಗೆ ನೀಡಿರುವ ಸಂದೇಶ ರೂಪದ ಜಾಹೀರಾತಿನಲ್ಲಿ ಕೊಂಡಾಡಿದ್ದಾರೆ.

ಭಾರತ ಮತ್ತು ಜಪಾನ್‌ ದೇಶಗಳು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಭಾರತದ ಆರ್ಥಿಕ ಬೆಳವಣಿಗೆಗಾಗಿ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ ಅಬೆ ಅವರು, ಮೋದಿ ಅವರ ಮೇಕ್‌ ಇನ್‌ ಇಂಡಿಯಾಗಾಗಿ ಸಹಾಯ ಒದಗಿಸುವ ಭರವಸೆ ನೀಡಿದರು. ಇದಕ್ಕೆ ಹೈಸ್ಪೀಡ್‌ ರೈಲು, ಸಬ್‌ವೇಗಳು, ಇತರ ಮೂಲಸೌಕರ್ಯ, ಜಪಾನ್‌ನ ತಂತ್ರಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತೇವೆ ಎಂದೂ ಹೇಳಿದರು. ಮುಂಬಯಿ-ಅಹ್ಮದಾಬಾದ್‌ನ ಬುಲೆಟ್‌ ಟ್ರೈನ್‌ ಯೋಜನೆ ಮುಗಿದ ಮೇಲೆ ಭಾರತ-ಜಪಾನ್‌ ನಡುವೆ ಹೊಸ ಅಧ್ಯಾಯವೇ ಶುರುವಾಗಲಿದೆ ಎಂದೂ ಅಬೆ ಹೇಳಿದ್ದಾರೆ.