ಮಂಗಳೂರು : ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ : ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ : ತಂದೆ ಚಿತ್ತರಂಜನ್ -Vishwanews24
ಮಂಗಳೂರು : ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ : ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ : ತಂದೆ ಚಿತ್ತರಂಜನ್ -Vishwanews24
ಮಂಗಳೂರು: ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮದಲ್ಲೂ ತನಿಖೆ ಪ್ರಗತಿಯಲ್ಲಿದೆ. ತಂದೆ ಚಿತ್ತರಂಜನ್ ಅವರು, ”ನನ್ನ ಮಗಳು ಪ್ರೇಕ್ಷಾಳ ಅಂತಿಮ ಸಂಸ್ಕಾರದ ವೇಳೆಯೂ ಗಾಂಜಾ ಗ್ಯಾಂಗ್ ಬೆದರಿಕೆಯೊಡ್ಡಿದೆ” ಎಂದು ತಿಳಿಸಿದ್ದಾರೆ.
”ಗಾಂಜಾ ಗ್ಯಾಂಗ್ ಬಗ್ಗೆ ಮಾತನಾಡದಂತೆ ಈ ತಂಡವು ನಮಗೆ ಎಚ್ಚರಿಕೆ ನೀಡಿದೆ. ನಮಗೆ ಮಾತ್ರವಲ್ಲದೆ ಸಮೀಪದ ಅಂಗಡಿ, ನೆರೆಹೊರೆಯ ಮನೆಯವರಿಗೆಲ್ಲಾ ಈ ತಂಡವು ಬೆದರಿಸಿದೆ. ನಮಗೆಲ್ಲರಿಗೂ ಇಷ್ಟೆಲ್ಲಾ ಕಿರುಕುಳ ನೀಡಿದವರು ಇನ್ನು ನನ್ನ ಮಗಳಿಗೆಷ್ಟು ಕಿರುಕುಳ ನೀಡಿರಬಹುದು” ಎಂದು ಪ್ರಶ್ನಿಸಿರುವ ಅವರು, ”ಇದು ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ” ಎಂದು ದೂರಿದ್ದಾರೆ.
”ನನ್ನ ಭವಿಷ್ಯವೇ ಬೆಂಗಳೂರಿನಲ್ಲಿ ನಡೆಯುವ ಫೋಟೋ ಶೂಟ್ನಲ್ಲಿದೆ. ಪರಿಚಯಸ್ಥ ಯುವಕನೇ ನನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಪ್ರೇಕ್ಷಾ ತಿಳಿಸಿದ ಹಿನ್ನೆಲೆಯಲ್ಲಿ ಪ್ರೇಕ್ಷಾಳಿಗೆ ನಾವು ಬೆಂಗಳೂರಿಗೆ ತೆರಳಲು ಅನುಮತಿ ನೀಡಿದ್ದೆವು. ಈ ಹಿನ್ನೆಲೆ ಅವಳು ಸಾವನ್ನಪ್ಪುವ ಹಿಂದಿನ ದಿನವೇ ಬ್ಯೂಟಿಪಾರ್ಲರ್ ಹೋಗಿ ಫೇಷಿಯಲ್ ಮಾಡಿಸಿಕೊಂಡಿದ್ದಳು. ಆದರೆ ಗಾಂಜಾ ವ್ಯಸನಿ ಗೆಳೆಯ ಯತೀನ್ರಾಜ್ ಆಕೆ ಬೆಂಗಳೂರಿಗೆ ಹೋಗಬಾರದು ಎಂದು ಬೆದರಿಕೆ ಹಾಕಲು ಆರಂಭಿಸಿದ. ಇದನ್ನು ಆಕೆ ತನ್ನ ಸಹೋದರಿಯಲ್ಲಿ ಮಾತ್ರ ಹೇಳಿದ್ದಳು. ಬೇರೆ ಯಾರಿಗೂ ತಿಳಿದಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ಬೆಳಿಗ್ಗೆ 10.30ಕ್ಕೆ ಪ್ರೇಕ್ಷಾ ನನಗೆ ಕರೆ ಮಾಡಿ ಮಧ್ಯಾಹ್ನ ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದಳು. ಆದರೆ ಬಳಿಕ ನಡೆದದ್ದೆ ಬೇರೆ” ಎಂದು ತಂದೆ ಚಿತ್ತರಂಜನ್ ಹೇಳಿದ್ದಾರೆ.
ಇನ್ನು ಪ್ರೇಕ್ಷಾ ಮನೆಗೆ ಹಲವು ನಾಯಕರುಗಳು ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಅಂಗಾರ ಅವರು ಕೂಡಾ ಭೇಟಿ ನೀಡಿದ್ದು, ಈ ಪ್ರಕರಣದ ಹಿಂದೆ ಯಾರಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ. ನಾವು ಯಾರೂ ಕೂಡಾ ಯಾವ ಗಾಂಜಾದವರಿಗೂ ಹೆದರಬೇಕಾಗಿಲ್ಲ. ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
