ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ – vishwanews24
ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ
ಮಂಗಳೂರು: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂಟೆ ಹಾಗೂ ದನಕರುಗಳ ಅಕ್ರಮ ಹತ್ಯೆ, ಜಾನುವಾರುಗಳ ಅನಧಿಕೃತ ಸಾಗಾಟ ಮತ್ತು ಅಕ್ರಮ ಮಾಂಸ ಮಾರಾಟವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಡಿಸಿ) ದರ್ಶನ್ ಹೆಚ್.ವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಜಾನುವಾರುಗಳ ಅಕ್ರಮ ಹತ್ಯೆ ಮತ್ತು ಸಾಗಾಟ ತಡೆಗಟ್ಟುವ ಕುರಿತು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಕ್ರಮ ಸಾಗಾಟವನ್ನು ತಡೆಯಲು ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಪ್ರಾಣಿಗಳನ್ನು ಸಾಗಿಸುವ ವಾಹನಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಅವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ:
ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! vishwanews24
ಜಾನುವಾರುಗಳನ್ನು ಸಾಗಿಸುವಾಗ ಸಾರಿಗೆ ಪರವಾನಗಿ, ಜಾನುವಾರು ಮಾಲೀಕರ ವಿವರಗಳು, ಖರೀದಿದಾರರ ವಿವರಗಳು, ವಾಹನ ನೋಂದಣಿ ದಾಖಲೆಗಳು ಮತ್ತು ಚಾಲಕನ ವಿವರಗಳು ಸೇರಿದಂತೆ ಅಧಿಕೃತ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಎಲ್ಲಾ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಯಾವುದೇ ಆವರಣ ಅಥವಾ ಕಟ್ಟಡದಲ್ಲಿ ಕಾನೂನುಬಾಹಿರವಾಗಿ ಪ್ರಾಣಿಗಳನ್ನು ವಧೆ ಮಾಡುವುದು ಕಂಡುಬಂದಲ್ಲಿ, ನಿಯಮಾನುಸಾರ ಅಂತಹ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಾನುವಾರುಗಳ ಅಕ್ರಮ ಸಾಗಾಟ ಮತ್ತು ಹತ್ಯೆಯನ್ನು ತಡೆಗಟ್ಟಲು ಈಗಾಗಲೇ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಇರುವ ಅಗತ್ಯತೆಯನ್ನು ಅವರು ಒತ್ತಿಹೇಳಿದರು.
ಇದನ್ನೂ ಓದಿ:
ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! vishwanews24
ಈ ಪ್ರಮುಖ ಸಭೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ ಡಾ. ಅಶೋಕ್ ಕೆ.ಆರ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಹಾಗೂ ಇಲಾಖೆಯ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
