ಮಂತ್ರಾಲಯದ ಹೆಸರಿನಲ್ಲಿ ಆನ್‌ಲೈನ್ ವಂಚನೆ ಆರೋಪ : ಭಕ್ತರಿಗೆ ಎಚ್ಚರಿಕೆ ಸಂದೇಶ – vishwanews24

Featured, ರಾಜ್ಯ ನ್ಯೂಸ್

ಮಂತ್ರಾಲಯದ ಹೆಸರಿನಲ್ಲಿ ಆನ್‌ಲೈನ್ ವಂಚನೆ ಆರೋಪ : ಭಕ್ತರಿಗೆ ಎಚ್ಚರಿಕೆ ಸಂದೇಶ

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹೆಸರಿನಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಭಕ್ತರು ಎಚ್ಚರಿಕೆ ವಹಿಸುವಂತೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಎಚ್ಚರಿಕೆ ನೀಡಿದ್ದಾರೆ.

ಆರಾಧನಾ ಮಹೋತ್ಸವ, ಗುರು ವೈಭವೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿಯೂ ರಾಯರ ಭಕ್ತರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ರೂಂ ಬುಕ್ಕಿಂಗ್, ಆನ್‌ಲೈನ್‌ನಲ್ಲಿ ಪರಿಮಳ ಪ್ರಸಾದ ಒದಗಿಸುವುದು ಹಾಗೂ ದೇಣಿಗೆ ಸಂಗ್ರಹ ಸೇರಿದಂತೆ ವಿವಿಧ ಸೇವೆಗಳ ಹೆಸರಿನಲ್ಲಿ ಹಣ ಪಡೆದು ವಂಚಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಠದಿಂದ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.

ಬೆಳ್ತಂಗಡಿ: ಸೆ. 7ರಿಂದ ದಿಡುಪೆ ಜಲಪಾತ ವೀಕ್ಷಣೆಗೆ ಮುಕ್ತ ; ಗಡಾಯಿಕಲ್ಲು ಚಾರಣಕ್ಕೆ ನಿಷೇಧ ಮುಂದುವರಿಕೆ – vishwanews24

ಮಂತ್ರಾಲಯ ಮಠದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೆಬ್‌ಸೈಟ್‌ಗಳು, ವಾಟ್ಸ್‌ಆಪ್ ಖಾತೆಗಳು ಹಾಗೂ ಖಾಸಗಿ ವ್ಯಕ್ತಿಗಳ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀ ಸುಬುಧೇಂದ್ರ ತೀರ್ಥರು ಸೂಚಿಸಿದ್ದಾರೆ. ಮಠದ ಹೆಸರಿನಲ್ಲಿ ಹಣ ಸಂಗ್ರಹಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಶ್ರೀಮಠದಿಂದ ದೇಣಿಗೆ ಕೇಳುವಂತಹ ಯಾವುದೇ ವ್ಯವಸ್ಥೆ ಇಲ್ಲವಾಗಿದ್ದು, ಇಂತಹ ಸಂದೇಶಗಳು ಅಥವಾ ಕರೆಗಳು ಬಂದರೆ ಭಕ್ತರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

ಪರಿಮಳ ಪ್ರಸಾದವನ್ನು ಆನ್‌ಲೈನ್ ಮೂಲಕ ಒದಗಿಸುವ ಯಾವುದೇ ಅಧಿಕೃತ ಸೇವೆ ಮಠದಿಂದ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪರಿಮಳ ಪ್ರಸಾದದ ಹೆಸರಿನಲ್ಲಿ ಯಾರಾದರೂ ಆನ್‌ಲೈನ್ ಮೂಲಕ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಆತುರದಲ್ಲಿ ಹಣ ಪಾವತಿಸಬಾರದು ಎಂದು ಸಲಹೆ ನೀಡಿದ್ದಾರೆ. ಅದೇ ರೀತಿ ಮಠದಲ್ಲಿ ರೂಂ ಬುಕ್ಕಿಂಗ್ ಅಥವಾ ಇತರ ಸೇವೆಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಹಣ ಕೇಳಿದರೆ, ಅದರ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳದೆ ಹಣ ಪಾವತಿಸದಂತೆ ಭಕ್ತರಿಗೆ ಸೂಚಿಸಲಾಗಿದೆ. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸಂಬಂಧಿಸಿದ ಯಾವುದೇ ಸೇವೆ ಅಥವಾ ಮಾಹಿತಿ ಅಗತ್ಯವಿದ್ದರೆ ಭಕ್ತರು ನೇರವಾಗಿ ಮಠದ ಕಾರ್ಯಾಲಯ ಅಥವಾ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಶ್ರೀ ಸುಬುಧೇಂದ್ರ ತೀರ್ಥರು ಸಲಹೆ ನೀಡಿದ್ದಾರೆ.

ಉಡುಪಿ:  ವಿಟ್ಲಪಿಂಡಿ ಉತ್ಸವ ವೇಳೆ ಶ್ರೀಗಳ ಕೈಯಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ – vishwanews24

ಅನಧಿಕೃತ ವೆಬ್‌ಸೈಟ್‌ಗಳು, ಖಾಸಗಿ ವ್ಯಕ್ತಿಗಳು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನೀಡಲಾಗುವ ಮಾಹಿತಿಯನ್ನು ನಂಬಿ ಹಣ ಕಳೆದುಕೊಳ್ಳದಂತೆ ಭಕ್ತರು ಎಚ್ಚರಿಕೆ ವಹಿಸಬೇಕು. ಯಾವುದೇ ಅನುಮಾನಾಸ್ಪದ ಕರೆ, ಸಂದೇಶ ಅಥವಾ ಹಣ ಪಾವತಿಯ ಮನವಿ ಬಂದರೆ ಮೊದಲು ಮಠದ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

Leave a Reply