ಮಾರ್ಚ್ 24 ಮತ್ತು 25 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – Vishwanews24
ಕಾಪು: ತುಳು ನಾಡಿನ ಸಪ್ತ ಜಾತ್ರೆಗಳಲ್ಲಿ ಒಂದೆಂಬ ಹೆಗ್ಗಳಿಕೆ ಗಳಿಸಿರುವ ಕಾಪುವಿನ ಪ್ರಸಿದ್ದ ಮೂರೂ ಮಾರಿಗುಡಿಗಳಲ್ಲಿ ವರ್ಷಂಪ್ರತಿ ನಡೆಯುವ ಸುಗ್ಗಿ ಮಾರಿ ಪೂಜೆ ಮಾ. 24 ಮತ್ತು ಮಾ.25ರಂದು ಏಕಕಾಲದಲ್ಲಿ ನಡೆಯಲಿದೆ. ಮಂಗಳವಾರ ರಾತ್ರಿ ಮಾರಿ ಪೂಜೆ, ಬುಧವಾರ ಮಧ್ಯಾಹ್ನ ದರ್ಶನ ಸೇವೆ ಬಳಿಕ ಮಾರಿ ವಿಸರ್ಜನೆ ಜರುಗಲಿದೆ.
ಮಾ. 17 ರಂದು ಬೇಟೆ (ಕುರಿ) ಬಿಡುವ ಮೂಲಕ ಮಾರಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಮಾ. 25 ರಂದು ಬುಧವಾರ ಸಂಜೆಯ ವರೆಗೂ ಮಾರಿ ಪೂಜಾ ಮಹೋತ್ಸವ ಮುಂದುವರಿಯುತ್ತದೆ. ಮಂಗಳವಾರ ರಾತ್ರಿ ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಸಂಖ್ಯೆಯ ಕುರಿ-ಆಡು ಮತ್ತು ಕೋಳಿಗಳನ್ನು ಭಕ್ತರು ಮಾರಿಪೂಜೆಯ ಪ್ರಯುಕ್ತ ಸಮರ್ಪಿಸುತ್ತಾರೆ.
ಈ ಜಾತ್ರೆಗೆ ಅವಿಭಜಿತ ದಕ ಜಿಲ್ಲೆಗಳಲ್ಲದೆ ಘಟ್ಟ ಪ್ರದೇಶ ಹಾಗೂ ದೂರದ ಮಹಾರಾಷ್ಟ್ರದಿಂದ ಭಕ್ತಾದಿಗಳು ಬಂದು ಭಾಗವಹಿಸುತ್ತಾರೆ. ಭಕ್ತರು ದಾಖಲೆಯ ಸಂಖ್ಯೆಯಲ್ಲಿ ಹರಕೆ ರೂಪದಲ್ಲಿ ಹೂವಿನ ಪೂಜೆ, ಕುಂಕುಮಾರ್ಚನೆ, ಗದ್ದುಗೆ ಪೂಜೆ ಸಹಿತ ನಾನಾ ಸೇವೆಗಳನ್ನು ನಡೆಸುತ್ತಾರೆ.
