ಮೀನು ಸಾಗಾಟ ವಾಹನಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ: 604 ಪ್ರಕರಣ ದಾಖಲು, ₹3.02 ಲಕ್ಷ ದಂಡ ವಸೂಲಿ – vishwanews24

Featured, ದಕ್ಷಿಣ ಕನ್ನಡ

ಮೀನು ಸಾಗಾಟ ವಾಹನಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ: 604 ಪ್ರಕರಣ ದಾಖಲು, ₹3.02 ಲಕ್ಷ ದಂಡ ವಸೂಲಿ

ಮಂಗಳೂರು : ಮೀನು ಸಾಗಾಟದ ಲಾರಿಗಳಿಂದ ರಸ್ತೆಯ ಮೇಲೆ ಕೊಳಚೆ ನೀರು ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಿಯಮ ಉಲ್ಲಂಘಿಸುವ ಮೀನು ಸಾಗಾಟ ವಾಹನಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಈ ವರ್ಷದ ಇಲ್ಲಿಯವರೆಗೆ 604 ಪ್ರಕರಣಗಳನ್ನು ದಾಖಲಿಸಿ ಒಟ್ಟು 3,02,000 ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 30ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೀನು ಸಾಗಾಟದ ವೇಳೆ ವಾಹನಗಳಿಂದ ನೀರು ಸೋರಿಕೆಯಾಗದಂತೆ ತಡೆಯಲು ಪೊಲೀಸರು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಕೆಲವು ರಸ್ತೆಗಳಲ್ಲಿ ಇಂತಹ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದರ ಜತೆಗೆ ಅಗತ್ಯ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಮೀನು ಸಾಗಾಟದ ವಾಹನಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು, ನಿಯಮಗಳು ಮತ್ತು ಕಾರ್ಯಾಚರಣೆಯ ಪ್ರಮಾಣಿತ ಕ್ರಮಗಳು (ಎಸ್‌ಒಪಿ) ಜಾರಿಯಲ್ಲಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎರಡು ದಿನ ಮಳೆ ಸಾಧ್ಯತೆ : ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ – vishwanews24

ಕೆಲವರು ಕಾನೂನು ಉಲ್ಲಂಘನೆಯನ್ನೇ ತಮ್ಮ ಹಕ್ಕು ಎಂಬಂತೆ ಭಾವಿಸಿ, ಅದನ್ನು ಸಮರ್ಥಿಸಿಕೊಳ್ಳುವುದಲ್ಲದೆ ಇತರರನ್ನೂ ಪ್ರೋತ್ಸಾಹಿಸುತ್ತಾರೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದರೂ ಸ್ಥಳ ಮತ್ತು ಸಂದರ್ಭವನ್ನು ಪರಿಗಣಿಸದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೊಮ್ಮೆ ಸಂಪನ್ಮೂಲಗಳ ಕೊರತೆಯಿಂದ ಕ್ರಮ ಕೈಗೊಳ್ಳುವುದು ವಿಳಂಬವಾಗಬಹುದು. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಮೀನು ಸಾಗಾಟದ ಲಾರಿಗಳಿಂದ ರಸ್ತೆಗೆ ಹರಿಯುವ ಕೊಳಚೆ ನೀರು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಲಾರಿಗಳು ಹಾದುಹೋಗುವಾಗ ರಸ್ತೆಯ ಮೇಲೆ ನೀರು ಚೆಲ್ಲುವುದರಿಂದ ತೀವ್ರ ದುರ್ವಾಸನೆ ಹರಡುವುದಲ್ಲದೆ, ರಸ್ತೆ ಜಾರುವ ಅಪಾಯವೂ ಎದುರಾಗುತ್ತಿದೆ. ಇದರಿಂದ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಮೀನು ಸಾಗಾಟದ ವಾಹನಗಳ ಮೇಲೆ ಪೊಲೀಸರು ನಿರಂತರ ನಿಗಾ ಇರಿಸಬೇಕು. ನಿಯಮ ಉಲ್ಲಂಘಿಸುವ ಲಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಬ್ಬದ ಸಂಭ್ರಮ ಉಜ್ವಲ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ: ಯೋಗಿ ಆದಿತ್ಯನಾಥ್  – vishwanews24

Leave a Reply