ಮೋಜಿನಾಟದ ಉತ್ಸಾಹದಲ್ಲಿ ಎಚ್ಚರಿಕೆ , ಸಮುದ್ರಕ್ಕೆ ಇಳಿವ ಮುನ್ನ ಯೋಚಿಸಿ..

Featured, ಉಡುಪಿ

ಕಾಪು: ಕಾಪು ಬೀಚ್‌ ಪ್ರವಾಸಿಗರಿಗೆ ಸ್ವರ್ಗ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇದು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ಮೋಜಿನಾಟದ ಉತ್ಸಾಹದಲ್ಲಿ ಸ್ಥಳೀಯರು ಮತ್ತು ಲೈಫ್‌ ಗಾರ್ಡ್‌ಗಳು ಎಚ್ಚರಿಕೆ ನೀಡಿದರೂ, ಪ್ರವಾಸಿಗರು ಜಲಸಮಾಧಿಯಾಗುತ್ತಿದ್ದಾರೆ.  10 ವರ್ಷದಲ್ಲಿ 20ಕ್ಕೂ ಅಧಿಕ ಸಾವು ?
ಕಾಪು ಬೀಚ್‌ನಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರು ಮತ್ತು ಲೈಫ್‌ ಗಾರ್ಡ್‌ ಸದಸ್ಯರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಸಂಖ್ಯೆಯ ಯುವಕ – ಯುವತಿಯರು ಅಪಾಯ ದಿಂದ ಪಾರಾಗಿದ್ದಾರೆ.

ಅಪಾಯಕಾರಿ ಕಾಪು ಸಮುದ್ರ 
ಇಲ್ಲಿನ ಬೀಚ್‌ ಸುಂದರ, ಆಕರ್ಷಕ. ಆದರೆ ಬಲು ಅಪಾಯಕಾರಿ. ಸಮುದ್ರಕ್ಕಿಳಿದು ಆಟವಾಡಲು ಸುಮಾರು 10 ಮೀ. ಒಳಗೆ ಮಾತ್ರ ಜಾಗ ಪ್ರಶಸ್ತವಾಗಿದೆ. ಅದಕ್ಕೂ ಮುಂದೆ ಹೋದವರಿಗೆ ನೀರು ಕುಡಿಸದೇ ಇರುವುದಿಲ್ಲ.

ನಿರ್ಲಕ್ಷ್ಯದ್ದೇ ಸಮಸ್ಯೆ
ಕಾಪು ಬೀಚ್‌ನಲ್ಲಿ ಎಚ್ಚರಿಕೆ ಫ‌ಲಕಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಫ್‌ಗಾರ್ಡ್‌, ಹೋಂ ಗಾರ್ಡ್‌, ಕೋಸ್ಟಲ್‌ ಗಾರ್ಡ್‌ ಮತ್ತು ಪೊಲೀಸರ ಭದ್ರತೆಯಿದೆ. ಮುನ್ನೆಚ್ಚರಿಕೆ ನೀಡುವ ಸ್ಥಳೀಯರೂ ಇದ್ದಾರೆ. ಆದರೂ ಅವಘಡಗಳು ಸಂಭವಿಸುತ್ತಲೇ ಇವೆ. ಪ್ರವಾಸಿಗರು ಸಮುದ್ರದ ಬಗ್ಗೆ ನಿರ್ಲಕ್ಷ್ಯ ತಳೆಯುವುದರಿಂದಲೇ ಹೀಗಾಗುತ್ತಿದೆ.

ಬೀಚ್‌ ಸೇಫ್‌ ಅಲ್ಲ  
ಕರಾವಳಿಯ ಬೀಚ್‌ಗಳು ಸ್ನಾನ ಮಾಡುವುದಕ್ಕೆ ಸೇಫ್‌ ಅಲ್ಲ. ಬೀಚ್‌ನಲ್ಲಿ ನೀರಿಗಿಳಿಯುವ ಬಹುತೇಕ ಹೊರಗಿನವರು. ಅವರಿಗೆ ಈಜು ಕೂಡಾ ಬರುವುದಿಲ್ಲ.  ಲೈಫ್‌ಗಾರ್ಡ್‌ಗಳು ನೀಡುವ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸುವುದರಿಂದ ಅಪಾಯವನ್ನು ಆಹ್ವಾನಿಸಿ ಕೊಳ್ಳುತ್ತಾರೆ. ಪ್ರವಾಸಿಗರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
– ಯತೀಶ್‌ ಬೈಕಂಪಾಡಿ,
ಸಿಇಒ, ಬೀಚ್‌ ಟೂರಿಸಂ ಡೆವಲಪ್‌ಮೆಂಟ್‌ ಪ್ರಾಜೆಕ್ಟ್ 

ಎಚ್ಚರಿಕೆ ನಿರ್ಲಕ್ಷ್ಯ ಬೇಡ
ಪ್ರತಿ ಬಾರಿ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ಆದರೆ ಅದನ್ನು ಪ್ರವಾಸಿಗರು ನಿರ್ಲಕ್ಷಿಸುತ್ತಾರೆ. ಮೊನ್ನೆಯ ಪ್ರಕರಣದಲ್ಲೂ ಎಚ್ಚರಿಕೆ ನೀಡಿದಾಗ, ಹೇಗಿರಬೇಕೆಂದು ನಮಗೆ ತಿಳಿದಿದೆ. ನಮ್ಮ ಜೀವದ ಬಗ್ಗೆ ನಮಗೆ ಗೊತ್ತಿಲ್ಲವೇ?, ನಿಮಗೇಕೆ ನಮ್ಮ ಉಸಾಬರಿ ಎಂದು ಎದುರುತ್ತರ ನೀಡಿ ಸಮುದ್ರಕ್ಕೆ ಇಳಿದಿದ್ದೇ ಅಪಾಯಕ್ಕೆ ಆಹ್ವಾನವಾಯಿತು.
 - ಪ್ರಫ‌ುಲ್ಲಾ, ಬೀಚ್‌ ನಿರ್ವಹಣಾ ತಂಡದ ಸದಸ್ಯೆ