ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳಬಹುದು, ಬಿಎಸ್ವೈ ಸಿಎಂ ಆಗುವುದು ಗ್ಯಾರಂಟಿ : ಡಿವಿಎಸ್
ಬೆಂಗಳೂರು: ರಾಜ್ಯದ ರಾಜಕಾರಣ ನಿಂತ ನೀರಲ್ಲ. ಸಾಕಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾಗಿ ಕ್ರಸ್ಟ್ ಗೇಟ್ ತೆರೆದು ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಯಾವುದೇ ಕ್ಷಣದಲ್ಲಾದರೂ ಸರ್ಕಾರ ಬೀಳಬಹುದು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನ ಅವರಿಗೆ ಬುದ್ಧಿ ಕಲಿಸುತ್ತಾರೆ. ಶೇಕಡಾ 70ರಷ್ಟು ಸ್ಥಾನಗಳು ಬಿಜೆಪಿಗೆ ಸಿಗುತ್ತವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಕಾಲದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಗರಣಗಳು ಮುಂದುವರೆದಿವೆ. ಮೊದಲು ಅವರು ಒಬ್ಬರೇ ಲೂಟಿ ಮಾಡುತ್ತಿದ್ದರು. ಈಗ ಇಬ್ಬರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಇಬ್ಬರು ಕ್ಯಾಪ್ಟನ್ಗಳು ಎಂದು ಡಿವಿಎಸ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದೇ ವೇಳೆ ಅಕ್ರಮ ಬಾಂಗ್ಲಾ ವಲಸಿಗರು ಬಗ್ಗೆ ಮಾತನಾಡಿದ ಅವರು, ಪಕ್ಕದ ದೇಶಗಳಿಂದ ಬಂದ ದೇಶದ್ರೋಹಿಗಳನ್ನು ನಮ್ಮಲ್ಲಿ ಇರಿಸಿಕೊಳ್ಳಬಾರದು ಎಂಬುದು ಎಲ್ಲಾ ದೇಶಪ್ರೇಮಿಗಳ ಆಶಯ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಡೆದ ಸಮೀಕ್ಷೆಯಲ್ಲಿ 41ಲಕ್ಷ ಅಕ್ರಮ ವಲಸಿಗರಿದ್ದಾರೆ. ಬೆಂಗಳೂರಿನಲ್ಲೂ ಸುಮಾರು ಒಂದೂವರೆ ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲೂ ಮೂರ್ನಾಲ್ಕು ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಮಾಹಿತಿ ಇದೆ. ಅವರೆಲ್ಲಾ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಯಾವುದೇ ಕಾರಣಕ್ಕೂ ದೇಶದ್ರೋಹಿಗಳನ್ನು ಬಿಡುವುದಿಲ್ಲ ಎಂದು ಹೇಳಿದರು.
