ರಾಮಮಂದಿರ ನಿರ್ಮಾಣ ಬಿಜೆಪಿಯ ಆದ್ಯ ಕರ್ತವ್ಯವಾಗಿದೆ: ಅಮಿತ್ ಶಾ
ನವದೆಹಲಿ: ‘ನಿಗದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಆದ್ಯತೆ. ಅದಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುಡುಗಿದ್ದಾರೆ. ರಾಮ ಲೀಲಾ ಮೈದಾನದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ ವಿರುದ್ಧ ಉಳಿದ ಪಕ್ಷಗಳು ಒಟ್ಟಾಗಿ ಹೋರಾಡುತ್ತಿದ್ದವು. ಈಗ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿವೆ. ಆದರೆ ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಸಾಧ್ಯ ಎಂದು ಅಮಿತ್ ಷಾ ಹೇಳಿದರು. ಪ್ರಧಾನಿ ಮೋದಿ ಕಾರ್ಯಕಾರಿಣಿ ಉದ್ಘಾಟಿಸಿದರು. ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಗೃಹ ಸಚಿವ ರಾಜನಾಥ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಿತ ಹಲವು ಸಚಿವರು, ಮುಖಂಡರು, ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು.
ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಯೋಧ್ಯೆಯಲ್ಲಿಯೇ ಆದಷ್ಟು ಬೇಗ ರಾಮಮಂದಿರ ನಿರ್ಮಿಸಲಾಗುವುದು ಎಂದು ಪುನರುಚ್ಚರಿಸಿದ ಅಮಿತ್ ಶಾ, ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಶೇ, 10 ರಷ್ಟು ಮೀಸಲಾತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆಯಲ್ಲಿ ವಿನಾಯಿತಿ, ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳ ಬಗ್ಗೆ ಮಾತನಾಡಿದರು.
ಲೋಕಸಭಾ ಚುನಾವಣೆ ಎದುರಿಸುವ ಘೋಷವಾಕ್ಯವನ್ನು ಕಾರ್ಯಕಾರಿಣಿಯಲ್ಲಿ ಮೊಳಗಿಸಲಾಯಿತು. ಅಬ್ ಕೀ ಬಾರ್ ಫಿರ್ ಮೋದಿ ಸರ್ಕಾರ್ (ಈ ಬಾರಿ ಮತ್ತೊಮ್ಮೆ ಮೋದಿ ಸರ್ಕಾರ) ಎಂದು ಸಭೆಯಲ್ಲಿ ಒಕ್ಕೊರಲಿನ ಧ್ವನಿ ಕೇಳಿತು.
