ಲಕ್ನೋ: ಗ್ಯಾಂಗ್ ಸ್ಟಾರ್ ಅತಿಕ್ ಅಹ್ಮದ್ ಪುತ್ರ ಅಸಾದ್ ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ಗೆ ಬಲಿ – Vishwanews24
ಲಕ್ನೋ: ಗ್ಯಾಂಗ್ ಸ್ಟಾರ್ ಅತಿಕ್ ಅಹ್ಮದ್ ಪುತ್ರ ಅಸಾದ್ ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ಗೆ ಬಲಿ
ಲಕ್ನೋ: ಮಾಜಿ ಸಂಸದ, ಗ್ಯಾಂಗ್ ಸ್ಟಾರ್ ಅತಿಕ್ ಅಹ್ಮದ್ ಪುತ್ರ ಅಸಾದ್ ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಸಾದ್ ಮತ್ತು ಗುಲಾಂ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ನಾಪತ್ತೆಯಾಗಿದ್ದ ಈ ಇಬ್ಬರನ್ನು ಇಂದು ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ.
2005ರ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜುಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು.
ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?
2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.
