ಲೋಕಸಭೆ ಚುನಾವಣೆ: ಬಿಜೆಪಿ 22 ಸ್ಥಾನಗಳಲ್ಲಿ ಗೆದ್ದರೆ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ: ಬಿ ಎಸ್ ಯಡಿಯೂರಪ್ಪ – Vishwanews24

Featured, ರಾಜ್ಯ ನ್ಯೂಸ್
ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಮೈತ್ರಿ ಕುರಿತು ಆಯಾ ಪಕ್ಷಗಳ ಮುಖಂಡರಲ್ಲೇ ಅಸಮಾಧಾನವಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಆ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ರಚಿಸಿಕೊಂಡಿರುವ ದೋಸ್ತಿ ಸರ್ಕಾರದ ವಿರುದ್ದ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಗೊಳಗೆ ಅಧಿಕಾರಕ್ಕಾಗಿ ಕಚ್ಚಾಡುತ್ತಿದೆ. ಈ ಬಾರಿಯ ಲೋಕ ಸಮರದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಆ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ರಾಜ್ಯದಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಉದ್ದೇಶವಿದೆ. ಬದಲಾವಣೆಯಾದರೆ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ಆಗಬಹುದು ಎಂದು ಹೇಳಿದರು. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದರು.