ಸರ್ಕಾರದ ಗಡುವು ಮುಕ್ತಾಯ: ಇಂದು ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಕ್ಕೆ ನಿರ್ಧಾರ -vishwanews24
ಸರ್ಕಾರದ ಗಡುವು ಮುಕ್ತಾಯ: ಇಂದು ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಕ್ಕೆ ನಿರ್ಧಾರ
ಬೆಂಗಳೂರು :ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ವಾಹನ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡಿದೆ.
ಗಡುವು ಮುಗಿದರೂ ಆರೋಗ್ಯ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ನೌಕರರು ಆಕ್ರೋಶಗೊಂಡಿದ್ದು, ಇಂದು ರಾತ್ರಿ 8 ಗಂಟೆ ಬಳಿಕ 108 ಆ್ಯಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ ಬಂದ್ಗೆ ತೀರ್ಮಾನಿಸಿದ್ದಾರೆ.
ಒಂದು ವೇಳೆ ಇಂದು ಸಂಜೆಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೇವೆ ಸ್ಥಗಿತಗೊಳಿಸುವುದರ ಜೊತೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಯಲ್ಲಿ ಏರುಪೇರಾಗಿ, ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿದೆ.
ಆರೋಗ್ಯ ಇಲಾಖೆ ವಿರುದ್ಧ ಸಮರ: ತುರ್ತು ಮಧ್ಯಪ್ರವೇಶಕ್ಕೆ ಆಗ್ರಹ
ಸದ್ಯ ಆರೋಗ್ಯ ಇಲಾಖೆಯ ವಿರುದ್ಧ 108 ಆ್ಯಂಬುಲೆನ್ಸ್ ನೌಕರರು ಸಮರ ಸಾರಿದ್ದಾರೆ. ಸಾಮೂಹಿಕ ರಾಜೀನಾಮೆಗೆ ಸಿದ್ಧತೆ ನಡೆಸಿರುವ ನೌಕರರು, ಸೇವೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ. ಇಂದು ರಾತ್ರಿಯಿಂದಲೇ ಆ್ಯಂಬುಲೆನ್ಸ್ ಸೇವೆ ಬಂದ್ ಆಗುವ ಸಾಧ್ಯತೆಯಿರುವುದರಿಂದ ರಾಜ್ಯಾದ್ಯಂತ ರೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
