ಸುಪ್ರೀಂಕೋರ್ಟ್ ಮೈತ್ರಿ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎಂಬುದು ಭ್ರಮೆ : ಬಿ.ಎಸ್. ಯಡಿಯೂರಪ್ಪ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ವಿಪ್ ಅಧಿಕಾರದ ಬಗ್ಗೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ, ಆದರೆ, ಸುಪ್ರೀಂಕೋರ್ಟ್ ಈಗಾಗಲೇ ಅತೃಪ್ತರು ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಹೇಳುವ ಮೂಲಕ ವಿಪ್ ಪರಮಾಧಿಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಮಾಡಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಸೋಮವಾರ ಮೈತ್ರಿ ಸರ್ಕಾರ ಬೀಳುವುದು ಖಚಿತ, ಸೋಮವಾರ ಸುಪ್ರೀಂಕೋರ್ಟ್ ಮೈತ್ರಿ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎಂಬುದು ಭ್ರಮೆಯಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ನಿಮಗಿಲ್ಲ. ನೈತಿಕತೆ ಇದ್ದರೆ ಅಧಿಕಾರದಿಂದ ಇಳಿದು ಬಿಟ್ಟುಹೋಗಿ. ರಾಜ್ಯಪಾಲರ ಸೂಚನೆಗಳಿಗೆ ಕ್ಯಾರೇ ಅನ್ನುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅದಕ್ಕೂ ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.

ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರೇ ಯಾರೂ ನನ್ನನ್ನು ಕರೆದುಕೊಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಅವರ ಫೋಟೋ ಹಿಡಿದು ಗದ್ದಲವನ್ನೇ ಮಾಡಿದ್ದಾರೆ. ಹೀಗಾಗಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟ ಕಾರಣ ಡಿ.ಕೆ.ಶಿವಕುಮಾರ್ ಸದನದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.