ಹೊಟೇಲ್ ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ -Vishwanews24
ಹೊಟೇಲ್ ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ -Vishwanews24
ಬೆಂಗಳೂರು: ಮೈಸೂರಿನ ಹೋಟೆಲ್ವೊಂದರ ವೇಟರ್ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಸುತ್ತೋಲೆ ಹೊರಡಿಸಿರುವ ಇಂದ್ರಜಿತ್, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಯುವ ಜನತೆ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೈಸೂರು ಜಿಲ್ಲಾ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಉದ್ಯಮಿಗಳು, ಪ್ರಭಾವಿಗಳು ಸಾಮಾನ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮೈಸೂರಿನ ಸಂದೇಶ್ ನಾಗರಾಜ್ ಹೋಟೆಲ್ನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಇದಕ್ಕೆ ಪೂರಕವಾದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ವ್ಯವಸ್ಥೆ ಒತ್ತಡ ಹೇರಿತ್ತು. ಅರುಣಾ ಕುಮಾರಿ ವಿಚಾರದಲ್ಲೂ ಇದು ಮುಂದುವರೆದಿದೆ. ಹೀಗಾದರೆ ವ್ಯವಸ್ಥೆಯ ಮೇಲೆಸ ಜನಸಾಮಾನ್ಯರ ನಂಬಿಕೆ ಹೋಗುತ್ತದೆ ಅಂತ ಉಲ್ಲೇಖಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು ಗೃಹ ಸಚಿವರನ್ನ ಭೇಟಿ ಮಾಡುತ್ತಿರುವುದು ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.
