44ನೇ ವಯಸ್ಸಿನಲ್ಲಿ ಎಸೆಸೆಲ್ಸಿ ಪಾಸಾದ ಮಂಗಳೂರು ವಿವಿ ಕಾಲೇಜು ಅಟೆಂಡರ್ ಜಯಶ್ರೀ -Vishwanews24
ಸಾಧನೆಗೆ ಅಡ್ಡಿಯಾಗದ ವಯಸ್ಸು..
44ನೇ ವಯಸ್ಸಿನಲ್ಲಿ ಎಸೆಸೆಲ್ಸಿ ಪಾಸಾದ ಮಂಗಳೂರು ವಿವಿ ಕಾಲೇಜು ಅಟೆಂಡರ್ ಜಯಶ್ರೀ..
ಮೊದಲ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ ಪಾಸ್..
ಮಂಗಳೂರು : ಕೇವಲ 5ನೇ ತರಗತಿ ಕಲಿತ್ತಿದ್ದ 44 ವರ್ಷದ ಮಹಿಳೆ ಇದೀಗ ಎಸ್‌ಎಸ್‌ಎಲ್‌ಸಿ ತೇಗರ್ಡೆಯಾಗಿದ್ದಾರೆ.
ಕೇವಲ ಐದನೇ ತರಗತಿ ವಿದ್ಯಾರ್ಹತೆ ಪಡೆದು ಮಂಗಳೂರು ವಿವಿ ಕಾಲೇಜಿನ ತಾತ್ಕಾಲಿಕ ಅಟೆಂಡರ್ ಆಗಿರುವ ಜಯಶ್ರೀ, ಇದೀಗ ಮೊದಲ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ 35 ವರ್ಷಗಳ ಬಳಿಕ ಮತ್ತೆ ವಿದ್ಯಾರ್ಥಿನಿಯಾಗಿ ಗೆದ್ದಿದ್ದಾರೆ.
ಈ ನಡುವಿನ ಜೀವನದ ಬಂಡಿ ಕಡುಕಷ್ಟದಲ್ಲಿ ಸವೆದರೂ ಮತ್ತೆ ಮಕ್ಕಳಂತೆ ಪಾಠ ಕಲಿತವರು, ಇದೀಗ 625ಕ್ಕೆ 247 ಅಂಕಗೊಂದಿಗೆ ಪಾಸಾದ ಖುಷಿಯನ್ನೂ ಮಕ್ಕಳಂತೆಯೇ ಸಂಭ್ರಮಿಸಿದ್ದಾರೆ. ಅವರ ಜೀವನೋತ್ಸಾಹ ಎಂಥವರಿಗೂ ಸ್ಫೂರ್ತಿಯಂತಿದೆ.
ಮಂಗಳೂರಿನ ವೆಲೆನ್ಶಿಯಾ ಸೂಟರ್‌ಪೇಟೆಯಲ್ಲಿ ಜಯಶ್ರೀ ಮನೆ. ಪತಿ ಆಟೋ ಡ್ರೈವರ್ ಆಗಿದ್ದವರು ಈಗ ವಾಚ್‌ಮ್ಯಾನ್ ಕೆಲಸ ಮಾಡಿಕೊಂಡಿದ್ದಾರೆ. ಜೀವನ ಸಾಗಿಸಲು ಅನೇಕ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದವರಿಗೆ ನಗರದ ವಿವಿ ಕಾಲೇಜಿನಲ್ಲಿ ಕ್ಲೀನಿಂಗ್ ಕೆಲಸ ಸಿಕ್ಕಿತ್ತು. ಕ್ರಮೇಣ ಅಟೆಂಡರ್ ಸ್ಥಾನಕ್ಕೇರಿದರು. ಆದರೆ ನೌಕರಿ ಈಗಲೂ ತಾತ್ಕಾಲಿಕ ನೆಲೆಯಲ್ಲೇ ಮುಂದುವರಿದಿದೆ. ಈ ನಡುವೆ ಹೇಗಾದರೂ ಮಾಡಿ ಎಸ್‌ಎಸ್‌ಎಲ್‌ಸಿ ಪಾಸಾಗಲೇಬೇಕು ಎಂಬ ಹಠಕ್ಕೆ ಬಿದ್ದ ಜಯಶ್ರೀ ಈಗ ಅದನ್ನು ಸಾಕಾರಗೊಳಿಸಿದ್ದಾರೆ.
ಮಂಗಳೂರು ವಿವಿ ಕಾಲೇಜಿನ ಪ್ರೊ. ಉದಯ ಕುಮಾರ್ ಅವರು ನನಗೆ ಕಾಲೇಜಿನಲ್ಲಿ ಕೆಲಸ ಕೊಡಿಸಿದರು. ಅದೇ ನನಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಯಿತು. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಾಲೇಜಿನ ಡಾ.ಶೋಭಾ ಸ್ಫೂರ್ತಿ ನೀಡಿದ್ದಲ್ಲದೆ, ಮಾತಾ ಎಜ್ಯುಕೇಶನ್‌ಗೆ ಸೇರಿಸಿ ಫೀಸನ್ನೂ ಅವರೇ ಕಟ್ಟಿದ್ದರು ಎನ್ನುತ್ತಾರೆ ಜಯಶ್ರೀ.
ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದೇನೆ ಎಂದು ಯಾರೂ ಕೊಂಕು ಮಾತನಾಡಿಲ್ಲ. ಕುಟುಂಬದವರಾದಿಯಾಗಿ ಎಲ್ಲರೂ ಪ್ರೋತ್ಸಾಹಿಸಿದರು. ಈಗ ಪಾಸಾದ ಖುಷಿಯಲ್ಲಿ ಎಲ್ಲರೂ ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾಾರೆ. ತುಂಬ ಖುಷಿಯಾಗುತ್ತಿದೆ ಎಂದು ಜಯಶ್ರೀ ಹರ್ಷಪಟ್ಟರು.
ಈಗ ಇರುವುದು ತಾತ್ಕಾಾಲಿಕ ಕೆಲಸ. ಅದು ಕಾಯಂ ಆಗಬೇಕಾದರೆ ಎಸ್‌ಎಸ್‌ಎಲ್‌ಸಿ ಅಗತ್ಯವಿತ್ತು. ಅದಲ್ಲದಿದ್ದರೂ ನನಗೆ ಎಸೆಸೆಲ್ಸಿ ಮಾಡಲೇಬೇಕು ಎನ್ನುವ ಆಸೆಯೂ ಇತ್ತು. ಕೊನೆಗೂ 44ನೇ ವಯಸ್ಸಿನಲ್ಲಿ ಅದು ಸಾಕಾರವಾಗಿದೆ. ಇದಕ್ಕೆ ಕಾರಣಕರ್ತರಾದ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.
ಜಯಶ್ರೀ ಪಡೆದ ವಿಷಯವಾರು ಅಂಕ
ಅಂದ ಹಾಗೆ ಜಯಶ್ರೀ ಪಡೆದುಕೊಂಡಿರುವ ಅಂಕಗಳನ್ನ ನೋಡುವುದಾದ್ರೆ, ಕನ್ನಡದಲ್ಲಿ 60 ಇಂಗ್ಲೀಷ್‌ನಲ್ಲಿ 40. ಹಿಂದಿ, ಗಣಿತದಲ್ಲಿ 35, ವಿಜ್ಞಾನದಲ್ಲಿ 35, ಸಮಾಜ ವಿಜ್ಞಾನದಲ್ಲಿ 35 ಅಂಕ ಪಡೆದಿದ್ದಾರೆ.
