70ನೇ ಗಣರಾಜ್ಯೋತ್ಸವ ಸಂಭ್ರಮ : ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ವಜುಭಾಯಿ ವಾಲಾ – Vishwanews24
ಬೆಂಗಳೂರು : ದೇಶಾದ್ಯಂತ ಇಂದು 70 ನೇ ಗಣರಾಜ್ಯೋತ್ಸವ ಸಂಭ್ರಮ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ಸಂಚರಿಸಿ ಗೌರವ ರಕ್ಷಣೆಯನ್ನು ಸ್ವೀಕರಿಸಿದರು.
ಬಳಿಕ ಮಾನತಾಡಿದ ಅವರು, ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಇಂದು ರಾಷ್ಟ್ರ, ಸಾರ್ವಭೌಮತ್ವವನ್ನು ಕೊಂಡಾಡುವ ದಿನ. ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ದೇಶ ಸಂವಿಧಾನ ರಚಿತವಾಗಿ ಗಣರಾಜ್ಯವಾಯಿತು. ನಮ್ಮ ರಾಜ್ಯ ಅನೇಕ ಸವಾಲುಗಳನ್ನು ಮೆಟ್ಟಿನಿಂತು ಬೆಳೆದಿದೆ. ಕೊಡಗು ಮತ್ತು ಮಲೆನಾಡು ಭಾಗದಲ್ಲಿ ಪ್ರಾಕೃತಿಕ ವಿಕೋಪವಾಗಿತ್ತು. ಕೇಂದ್ರ ಮತ್ತು ರಾಜ್ಯದ ಸಹಯೋಗದೊಂದಿಗೆ ತುರ್ತು ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಬಡವರ ಬಂಧು ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಲಾಗಿದೆ. ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಲಾಗಿದೆ. 20 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿಗಳ ಮನೆ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
