ಅದಾನಿ ಯುಪಿಸಿಎಲ್ ಕಂಪೆನಿಯಿಂದ ಹುಸಿಯಾದ ಉದ್ಯೋಗ ಭರವಸೆ-ಮಾತುಕತೆ ನಡೆಯದೇ ಇದ್ದಲ್ಲಿ ಜನವರಿ 29 ರಂದು ಪ್ರತಿಭಟನೆ.-vishwanews24
ಅದಾನಿ ಯುಪಿಸಿಎಲ್ ಕಂಪೆನಿಯಿಂದ ಹುಸಿಯಾದ ಉದ್ಯೋಗ ಭರವಸೆ-ಮಾತುಕತೆ ನಡೆಯದೇ ಇದ್ದಲ್ಲಿ ಜನವರಿ 29 ರಂದು ಪ್ರತಿಭಟನೆ.
ಉಡುಪಿ: ಎರಡನೇ ಹಂತದ ಯುಪಿಸಿಎಲ್ ಅದಾನಿಯ ಘಟಕದ ವಿಸ್ತರಣೆಯ ಸಲುವಾಗಿ ಭೂಸ್ವಾಧಿನ ಮಾಡಿಕೊಂಡು ಕಂಪನಿ ನೀಡಿದ ಭರವಸೆಯ ಪ್ರಕಾರ ಉದ್ಯೋಗ ನೀಡದೆ ವಂಚಿರುತ್ತಾರೆ ಎಂದು ಉಡುಪಿಯಲ್ಲಿ ಭೂ ಸಂತ್ರಸ್ತರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯುಪಿಸಿಎಲ್ ಅದಾನಿ ಉಷ್ಣವಿದ್ಯುತ್ ಸ್ಥಾವರ ಘಟಕದ ವಿಸ್ತರಣೆಯ ಸಲುವಾಗಿ ಭೂಸ್ವಾಧೀನ ಮಾಡುವಾಗ ಮನೆಮಠ ಕಳೆದುಕೊಳ್ಳುವ ಭೂಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಕಂಪನಿಯಲ್ಲಿ ಖಾಯಂ ಉದ್ಯೋಗ ಅಥವಾ ಉದ್ಯೋಗ ಬೇಡವಾದಲ್ಲಿ ಉದ್ಯೋಗ ಪರಿಹಾರಧನ ನೀಡುವುದಾಗಿ ದಿನಾಂಕ 16/12/2015 ರಂದು ಮಾನ್ಯ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುತ್ತದೆ, ಆದರೆ ಸಭೆ ನಡೆದು ಈಗಾಗಲೇ ಐದು ವರ್ಷ ಕಳೆದಿದ್ದು, ಭೂಸಂತ್ರಸ್ತರನ್ನು ಒಕ್ಕಲೆಬ್ಬಿಸಿ 4 ವರ್ಷ ಕಳೆದಿದೆ. ಆದರೆ ಸಭೆಯಲ್ಲಿ ನಿರ್ಧರಿಸಲಾದ ಪ್ರಕಾರ ಮನೆಮಠ ಕಳೆದುಕೊಂಡ ಭೂಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಕೊಡಬೇಕಾಗಿದ್ದ ಖಾಯಂ ಉದ್ಯೋಗ ಅಥವಾ ಹೆಚ್ಚವರಿ ಪರಿಹಾರಧನ ಇನ್ನೂ ನೀಡಿರುವುದಿಲ್ಲ ಎಂದರು.
ಹೀಗಾಗಿ ಭೂಸಂತ್ರಸ್ತರು ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಯವರಿಗೆ, ಯುಪಿಸಿಎಲ್ ಆದಾನಿ ಕಂಪೆನಿಗ, KIADB ಗೆ, ಮಾನ್ಯ ಸ್ಥಳೀಯ ಶಾಸಕರಿಗೆ ರಾಜ್ಯ ಕೈಗಾರಿಕಾ ಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದ್ದರು ಇದುವರೆಗೆ ಯಾರಿಂದಲೂ ಸೂಕ್ತ ಪ್ರತಿಕ್ರಿಯೆ ಬಂದಿರುವುದಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಸಂತ್ರಸ್ಥರು ಅದಾನಿಯ ಮುಖ್ಯಸ್ಥ ಕಿಶೋರ್ ಆಳ್ವಾರಿಗೂ ಉದ್ಯೋಗ ನೀಡುವ ಕುರಿತು ಮನವಿ ಮಾಡಿದಾಗ, ಅವರು ನಮಗೆ ಸರಿಯಾಗಿ ಸ್ಪಂದಿಸಿರುವುದಿಲ್ಲ, ಅಲ್ಲದೇ ಘಟಕ ಸ್ಥಾಪನೆಗೆ ಸರಕಾರದ ಅನುಮತಿ ಸಿಕ್ಕಿರುವುದಿಲ್ಲ ಹಾಗಾಗಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದಿರುತ್ತಾರೆ.
ಆದರೆ ಇಂದು ಫಲವತ್ತಾದ ಕೃಷಿಭೂಮಿಯಲ್ಲಿ ಬರುತ್ತಿದ್ದ ಆದಾಯಕ್ಕೆ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದ ಕೃಷಿಕರು, ಇಂದು ತಮಗೆ ಬರುತ್ತಿದ್ದ ಕೃಷಿ ಆದಾಯವೂ ಇಲ್ಲದೆ, ಆ ಕಡೆ ಕಂಪನಿಯಿಂದ ಸಿಗಬೇಕಾದ ಉದ್ಯೋಗವೂ ಸಿಗದೆ, ತಮ್ಮ ಜೀವನ ಸಾಗಿಸಲು ಪರದಾಡುತ್ತಿದ್ದಾರೆ ಎಂದರು.
ಭೂ ಸ್ವಾಧೀನ ಪಡಿಸುವ ಸಮಯದಲ್ಲಿ KIADB ಭೂಸಂತ್ರಸ್ತರಿಗೆ ನೋಟಿಸ್ ಜಾರಿಮಾಡಿ ಒಂದು ವಾರದ ಗಡುವಿನ ಸಮಯವನ್ನು ನೀಡಿ, ಅದರೊಳಗೆ ಭೂಸಂತ್ರಸ್ತರು ತಮ್ಮ ಮನಮಠಗಳನ್ನು ತೆರವುಗೊಳಿಸಬೇಕೆಂದು ಎಚ್ಚರಿಕೆ ನೀಡಿರುತ್ತಾರೆ ಆ ನೋಟಿಸಿಗೆ ಬದ್ಧರಾಗಿ ಭೂಸಂತ್ರಸ್ಥರು ತಮ್ಮ ಮನಮಠ, ಕೃಷಿಭೂಮಿಯನ್ನು ತೆರವುಗೊಳಿಸಿರುತ್ತಾರೆ, ಆದರೆ KIADB ಆಗಲಿ ಅಥವಾ ಇದರಿಂದ ಲಾಭ ಪಡೆದ ಯುಪಿಸಿಎಲ್ ಅದಾನಿ ಕಂಪನಿಯಗಲಿ ತಾವು ನೀಡಿರುವ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ.
ಯುಪಿಸಿಎಲ್ ಅದಾನಿ ಜಂಟಿ ಅಧ್ಯಕ್ಷರ ಮಾತಿನ ಪ್ರಕಾರ ಘಟಕದ ವಿಸ್ತರಣೆಗೆ ಸರಕಾರದ ಅನುಮತಿ ಇಲ್ಲದೆ ಇದ್ದಿದ್ದರೆ ಭೂಸಂತ್ರಸ್ತರನ್ನೂ ಅಷ್ಟು ಅವಸರದಲ್ಲಿ ಒಕ್ಕಲೆಬ್ಬಿಸುವ ಅಗತ್ಯ ಏನಿತ್ತು? ಭೂಸಂತ್ರಸ್ತರನ್ನು ಒಕ್ಕಲೆಬ್ಬಿಸದ ಇರುತ್ತಿದ್ದರೆ ಕಳೆದ ನಾಲ್ಕು ವರ್ಷದಿಂದ ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯನ್ನು ಮಾಡುತ್ತ ಅದರಿಂದ ಬರುವ ಆದಾಯದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು ಆದರೆ ಈ ಕೃಷಿಭೂಮಿ ಕಂಪೆನಿಯ ಉಪಯೋಗಕ್ಕೂ ಇಲ್ಲದೆ ಕೃಷಿಕರ ಉಪಯೋಗಕ್ಕೂ ಬಾರದೆ ಕಳೆದ ನಾಲ್ಕು ವರ್ಷದಿಂದ ಅನಾಥವಾಗಿ ಬಿದ್ದಿದೆ ಎಂದು ಹೇಳಿದರು.
ಕಳೆದ ಐದು ವರ್ಷದಲ್ಲಿ ಹೊರ ರಾಜ್ಯದವರಿಗೆ ಉದ್ಯೋಗ ನೀಡಿ ಭೂಮಿ ಕಳೆದು ಕೊಂಡ ಸಂತ್ರಸ್ತರಿಗೆ ಉದ್ಯೋಗ ನೀಡದೆ ಕಡೆಗಣಿಸುತ್ತಾರೆ.
ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಒಂದು ವಾರದೊಳಗೆ ಭೂ ಸಂತ್ರಸ್ತರ ಜತೆ ಚರ್ಚಿಸಿ ಸಭೆ ಕರೆಯದೆ ಇದ್ದಲ್ಲಿ ಜನವರಿ 29 ರಂದು ಅದಾನಿ ಯುಪಿಸಿಎಲ್ ಘಟಕದ ಮುಖ್ಯದ್ವಾರದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರಾದ ಬಾಲಕೃಷ್ಣ, ನಿತೇಶ್ ಶೆಟ್ಟಿಗಾರ್,ಕಿರಣ್ ಕುಮಾರ್,ರೇಷ್ಮಾ,ಜೆನೇಟ್ ಡಿಸೋಜ, ಫೆಲ್ಸಿ ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್

