ಉತ್ತರಪ್ರದೇಶದಲ್ಲಿ ಇಂದಿನಿಂದ ಯೋಗಿ ಆಡಳಿತ: ಸಂಜೆ 4 ಗಂಟೆಗೆ ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ – Vishwanews24
ಉತ್ತರಪ್ರದೇಶದಲ್ಲಿ ಇಂದಿನಿಂದ ಯೋಗಿ ಆಡಳಿತ : ಸಂಜೆ 4 ಗಂಟೆಗೆ ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ – Vishwanews24
ಲಖನೌ: ಯೋಗಿ ಆದಿತ್ಯನಾಥ್ ಶುಕ್ರವಾರ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವ ಉತ್ತರಪ್ರದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯೋಗಿ ಪಾತ್ರರಾಗಲಿದ್ದಾರೆ.
ಗುರುವಾರ ಬಿಜೆಪಿಯ ಶಾಸಕಾಂಗ ಪಕ್ಷವು, ಯೋಗಿ ಅವರನ್ನು ತನ್ನ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ಇದಾದ ನಂತರ ಯೋಗಿ ಅವರು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಮುಂದೆ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದರು. ಸರ್ಕಾರ ರಚಿಸಲು ಯೋಗಿ ಅವರು ರಾಜ್ಯಪಾಲರನ್ನು ಆಹ್ವಾನಿಸಿದರು.
ಇಂದು ಸಂಜೆ 4 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಯೋಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಯೋಗಿ ಆದಿತ್ಯನಾಥ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಅವರೊಂದಿಗೆ ಸುಮಾರು 45 ಸಚಿವರು ಪ್ರಧಾನಿ ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.
ಸಿಎಂ ಬೊಮ್ಮಾಯಿ ಭಾಗಿ
ಯೋಗಿ ಆದಿತ್ಯನಾಥ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಳ್ಳಲಿದ್ದಾರೆ.
