ಕೊನೆಯವರೆಗೂ ಹೋರಾಡುವ ಮೂಲಕ ಸಂಕಷ್ಟದಿಂದ ಹೊರಬರುತ್ತೇನೆ : ಡಿ.ಕೆ. ಶಿ -Vishwanews24
ನವದೆಹಲಿ: ‘ನನಗೆ ಕಾನೂನಿನ ಮೇಲೆ ಅಪಾರ ಗೌರವ ಇದೆ. ಕೊನೆಯವರೆಗೂ ಹೋರಾಡುವ ಮೂಲಕ ಸಂಕಷ್ಟದಿಂದ ಹೊರಬರುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದೇ ತಪ್ಪು ಮಾಡಿಲ್ಲ. ಅಂತೆಯೇ ಜನಬೆಂಬಲ ದೊರೆತಿದೆ. ಕಷ್ಟಕಾಲದಲ್ಲಿ ಬೆಂಬಲ, ಧೈರ್ಯ ನೀಡಿದವರಿಗೆ ಧನ್ಯವಾದಗಳು’ ಎಂದರು.
‘ಜಾರಿ ನಿರ್ದೇಶನಾಲಯದ (ಇ.ಡಿ)ಸಮನ್ಸ್ ರದ್ದತಿ ಕೋರಿ ತಾಯಿ ಹಾಗೂ ಪತ್ನಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇದೇ 30ಕ್ಕೆ ಮುಂದೂಡಿದೆ. ಬೆಂಗಳೂರಿನಲ್ಲೇ ವಿಚಾರಣೆಗೆ ಕೋರಲಾಗಿದೆ. ಎಲ್ಲೇ ವಿಚಾರಣೆ ನಡೆಸಿದರೂ ಉತ್ತರ ನೀಡಲು ನಮ್ಮ ಕುಟುಂಬ ಸಿದ್ಧವಿದೆ’ ಎಂದು ಅವರು ಹೇಳಿದರು.
‘ವಿವಿಧ ಪಕ್ಷಗಳ ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ. ಬಂಧನ ಖಂಡಿಸಿ ಕೇರಳದಲ್ಲೂ ಪಂಜಿನ ಮೆರವಣಿಗೆ ನಡೆಸಲಾಗಿದೆ. ಬಂಧನದಲ್ಲಿದ್ದಾಗ ನಿತ್ಯ ನೂರಾರು ಬೆಂಬಲಿಗರು ನೋಡಲು ಬಂದಿದ್ದಾರೆ. ಅವರೇ ನನಗೆ ಶ್ರೀರಕ್ಷೆ’ ಎಂದರು.
‘ನಾನು ಕಾನೂನಿಗೆ ಬದ್ಧನಾಗಿರುವ ವ್ಯಕ್ತಿ. 7 ಬಾರಿ ಶಾಸಕನಾಗಿ, ಸರ್ಕಾರ ದಲ್ಲಿದ್ದು ಕಾನೂನು ರೂಪಿಸುವಲ್ಲಿ ಭಾಗಿಯಾಗಿದ್ದೇನೆ. ಚುನಾವಣಾ ಆಯೋಗದ ನಿಯಮಾನುಸಾರ ನನ್ನ ಆಸ್ತಿ ಘೋಷಿಸಿದ್ದೇನೆ. ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಕುರಿತು ಬೆಂಗಳೂರಿನಲ್ಲಿ ವಿವರವಾಗಿ ಮಾತನಾಡುತ್ತೇನೆ’ ಎಂದು ಅವರು ವಿವರಿಸಿದರು.
