ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ – vishwanews24
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ
ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕಗಳನ್ನು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆ ಜಾಗೃತ ದಳ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ.
ಮನೆಯೊಂದರಲ್ಲಿ ನಡೆಸಲಾಗುತ್ತಿದ್ದ ನಕಲಿ ಕೀಟನಾಶಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 200 ಲೀಟರ್‌ಗೂ ಹೆಚ್ಚು ವಿವಿಧ ಕೃಷಿ ರಾಸಾಯನಿಕಗಳು, ಪ್ಯಾಕಿಂಗ್ ಸಾಮಗ್ರಿ ಹಾಗೂ 11 ರಿಂದ 12 ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನ ವಶಪಡಿಸಿಕೊಂಡಿದ್ದಾರೆ.
ಆರೋಪಿ ಸೋಮಸುಂದರ್ ತಾನು ʻಬೆಳೆ ತಜ್ಞʼ ಎಂದು ಪರಿಚಯಿಸಿಕೊಂಡು ರೈತರ ವಿಶ್ವಾಸ ಗಳಿಸುತ್ತಿದ್ದ. ಬಳಿಕ ದಾಳಿಂಬೆ, ದ್ರಾಕ್ಷಿ, ಮಾವು ಸೇರಿದಂತೆ ತೋಟಗಾರಿಕಾ ಬೆಳೆ ಬೆಳೆಯುವ ರೈತರನ್ನು ಗುರಿಯಾಗಿಸಿಕೊಂಡು ನಕಲಿ ಕೀಟನಾಶಕಗಳನ್ನ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ತಾನೇ ಲೇಬಲ್‌ಗಳನ್ನ ಮುದ್ರಿಸಿ, ಬಾಟಲಿಗಳಿಗೆ ಅಂಟಿಸಿ, ಪ್ಯಾಕಿಂಗ್ ಮಾಡಿ ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ನಕಲಿ ಲೇಬಲ್‌ಗಳ ಜೊತೆಗೆ ಜಿಎಸ್‌ಟಿ ಸಂಖ್ಯೆಯೂ ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆರೋಪಿ ನಕಲಿ ಕೀಟನಾಶಕ ತಯಾರಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದು, ಕಳೆದ ಮೂರು ದಿನಗಳಿಂದ ಮಾತ್ರ ಈ ಕೆಲಸ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾನೆ. ಆದರೆ ಈ ಜಾಲ ಎಷ್ಟು ದಿನಗಳಿಂದ ನಡೆಯುತ್ತಿತ್ತು, ಇನ್ನೂ ಎಷ್ಟು ರೈತರು ಮೋಸಕ್ಕೆ ಒಳಗಾಗಿದ್ದಾರೆ ಎಂಬ ಕುರಿತು ಕೃಷಿ ಇಲಾಖೆ ತನಿಖೆ ಮುಂದುವರಿಸಿದೆ.
ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24
ಅವಧಿ ಮೀರಿದ ಹಾಗೂ ವಿವಿಧ ರಾಸಾಯನಿಕಗಳನ್ನ ಮಿಶ್ರಣ ಮಾಡಿ ತಯಾರಿಸಿದ ನಕಲಿ ಕೀಟನಾಶಕಗಳು ಬೆಳೆಗಳ ಇಳುವರಿ ಕುಗ್ಗಿಸುವುದಲ್ಲದೇ, ಮಣ್ಣು, ಪರಿಸರ ಮತ್ತು ಆಹಾರ ಸರಪಳಿಯ ಮೇಲೂ ಗಂಭೀರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ರೈತರು ಅಧಿಕೃತ ಪರವಾನಗಿ ಹೊಂದಿರುವ ಮಾರಾಟ ಕೇಂದ್ರಗಳಿಂದ ಮಾತ್ರ ಕೀಟನಾಶಕಗಳನ್ನ ಖರೀದಿಸಬೇಕು ಹಾಗೂ ಅನುಮಾನಾಸ್ಪದ ಉತ್ಪನ್ನಗಳ ಬಗ್ಗೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
