ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; ಆರೋಪಿ ಬಂಧನ – vishwanews24
ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; 23.20 ಗ್ರಾಂ ಮಾದಕ ವಸ್ತು ವಶ, ಆರೋಪಿ ಬಂಧನ
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ MDMA ಮಾದಕ ವಸ್ತು ಮಾರಾಟಕ್ಕೆ ಕಾಯುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಸೆಪ್ಟೆಂಬರ್ 23ರಂದು ನಡೆದಿದೆ.
ವಿಶ್ವಾಸಾರ್ಹ ಮೂಲಗಳಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಂಗಳೂರು ತಾಲೂಕು ಅರ್ಕುಳ ಜಂಕ್ಷನ್ ಬಳಿಯ ಯಶಸ್ವಿ ಹಾಲ್ ಎದುರು ರಾಷ್ಟ್ರೀಯ ಹೆದ್ದಾರಿ-73ರ ಬದಿಯಲ್ಲಿ MDMA ಮಾರಾಟಕ್ಕೆ ಕಾಯುತ್ತಿದ್ದ ಸುಭಾಶ್ (36) ಎಂಬಾತನನ್ನು ಬಂಧಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ – vishwanews24
ಬಂಧಿತನಿಂದ ಸುಮಾರು ₹1,15,000 ಮೌಲ್ಯದ 23.20 ಗ್ರಾಂ ತೂಕದ MDMA ಮಾದಕ ವಸ್ತು, ಎರಡು ಮೊಬೈಲ್ ಫೋನ್‌ಗಳು ಹಾಗೂ ತೂಕ ಮಾಪನದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಠಾಣೆಯಲ್ಲಿ ಅ.ಕ್ರ. 133/2026, ಕಲಂ 8(c), 22(c) NDPS Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕ ವಸ್ತು ಜಾಲದ ಹಿಂದೆ ಇರುವ ವ್ಯಕ್ತಿಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಆರೋಪಿಯ ವಿರುದ್ಧ ಈ ಹಿಂದೆಯೂ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ. 88/2026, ಕಲಂ 8(c), 22(b) NDPS Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು, ಮಾಹಿತಿ ಲಭ್ಯವಾದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
