ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರ ಕಾರಣ : ಕೋಟ ಶ್ರೀನಿವಾಸ ಪೂಜಾರಿ -Vishwanews24
ಬೆಂಗಳೂರು: ಒಂದೊಮ್ಮೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರವೇ ಕಾರಣ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನಿರ್ದೇಶನಕ್ಕೂ , ಯಾವ ನಿರ್ದೇಶನಕ್ಕೂ ಬಗ್ಗುತ್ತಿಲ್ಲ. ಒಂದೊಮ್ಮೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರವೇ ನೇರ ಕಾರಣ. ರಾಜ್ಯಪಾಲರು ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳು ಸುಪ್ರೀಂಕೋರ್ಟ್’ಗೆ ಹೋದರೂ ಪ್ರಯೋಜನ ಇಲ್ಲ ಎಂದು ಹೇಳಿದರು.
ಈ ಸರ್ಕಾರ ರಾಜ್ಯಪಾಲರ ಸಂದೇಶಗಳನ್ನು ಗೌರವಿಸಿಲ್ಲ. ಈ ಸರ್ಕಾರಕ್ಕೆ ಬಹುಮತ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ಜು.22ರ ಸೋಮವಾರ ಈ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

