ವಾಜಪೇಯಿ ಅವರ ‘ಶಾಂತಿಯ ಕನಸು’ ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ: ಇಮ್ರಾನ್ ಖಾನ್

Featured, ರಾಷ್ಟ್ರ ನ್ಯೂಸ್
ಇಸ್ಲಾಮಾಬಾದ್: ಇಂಡೋ-ಪಾಕ್ ನಡುವಿನ ಶಾಂತಿ-ಸೌಹಾರ್ಧಕ್ಕಾಗಿ ವಾಜಪೇಯಿ ಸಾಕಷ್ಟು ಶ್ರಮಿಸಿದ್ದರು ,ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿಯ ಕನಸನ್ನು ನನಸು ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪಾಕಿಸ್ತಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ವಾಜಪೇಯಿ ನಿಧನದ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ವಾಜಪೇಯಿ ಭಾರತ ಮಾತ್ರವಲ್ಲ ದಕ್ಷಿಣ ಏಷ್ಯಾ ಓರ್ವ ಪ್ರಬುದ್ಧ ರಾಜಕಾರಣಿ ಮತ್ತು ನಾಯಕರಾಗಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸೌಹಾರ್ಧ ಸಂಬಂಧ ಸುಧಾರಣೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಅವರ ಅಗಲಿಕೆ ನಿಜಕ್ಕೂ ನೋವು ತಂದಿದೆ. ಅವರ ಶ್ರಮ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸೌಹಾರ್ಧ ಸಂಬಂಧವನ್ನು ಗಟ್ಟಿಗೊಳಿಸಿ ಅವರ ಶಾಂತಿಯ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ವಾಜಪೇಯಿ ಅವರು ತಾವು ವಿದೇಶಾಂಗ ಸಚಿರಾಗಿದ್ದಾಗಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಣೆಗಾಗಿ ಸಾಕಷ್ಟು ಒತ್ತು ನೀಡಿದ್ದರು. ಅದೇ ಕಾರ್ಯವನ್ನು ಅವರು ಪ್ರಧಾನಿಯಾದ ಮೇಲೂ ಮುಂದುವರೆಸಿದರು. ಅವರ ಸೇವೆ ಮತ್ತು ಶ್ರಮ ನಿಜಕ್ಕೂ ಗಮನಾರ್ಹವಾದದ್ದು. ಪ್ರಧಾನಿ ಕಚೇರಿಯ ಗೌರವವನ್ನು ಹೆಚ್ಚಿಸಿದರು. ವಾಜಪೇಯಿ ಅವರು ತಮ್ಮ ಕಾರ್ಯದಿಂದಲೇ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಾರತದ ಪ್ರಜೆಗಳಿಗೆ ದೇವರು ಕರುಣಿಸಲಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.