ಅಧಿಕಾರಾವಧಿಯಲ್ಲಿ ಸಮಸ್ಯೆ ಬಗೆಹರಿಸಲು ವಿಫಲ.., ಮರಳು ಕಾರ್ಮಿಕರು, ಕರಾವಳಿ ಮೀನುಗಾರರ ಕೋಪಕ್ಕೆ ಗುರಿಯಾದ ಪ್ರಮೋದ್

Featured, ಉಡುಪಿ

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತನ್ನ ಶಾಸಕ ಕಮ್ ಸಚಿವಗಿರಿ ಅಧಿಕಾರದ ಸಂದರ್ಭದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ವಿರುದ್ಧ ತನ್ನ ಉದ್ಯಮದ ಉದ್ಯೋಗಿಯನ್ನೇ ಛೂ ಬಿಟ್ಟು ಚೆನ್ನೈ ಹಸಿರು ಪೀಠದಲ್ಲಿ ದೂರು ದಾಖಲಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ವರ್ಷ ಕಾಲ ಮರಳುಗಾರಿಕೆ ನಿಲ್ಲಿಸಿ ಜನಸಾಮಾನ್ಯರು ತೀವ್ರ ಕಷ್ಟ ಅನುಭವಿಸುವಂತೆ ಮಾಡಿರುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರ ಬೆಳಕಿನ ಮೀನುಗಾರಿಕೆಗೆ (ಲೈಟ್ ಫಿಶಿಂಗ್) ನಿಷೇಧ ಹೇರಿದ್ದರೂ ಸುಮಾರು ಒಂದೂವರೆ ತಿಂಗಳ ಕಾಲ ಮೀನುಗಾರರಲ್ಲಿ ಒಡಕು ಮೂಡಿಸಿ, ಅವರನ್ನೂ ಕಷ್ಟಕ್ಕೆ ತಳ್ಳಿರುವ ಘಟನೆ ಇನ್ನೂ ಮಾಸಿಲ್ಲ. ಈ ಎರಡು ಘಟನೆಗಳಿಂದ ಕಷ್ಟ-ನಷ್ಟ ಅನುಭವಿಸಿರುವವರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ಮರಳುಗಾರಿಕೆ ನಿಲ್ಲಿಸಿ, ಎಮ್ ಸ್ಯಾಂಡ್ (ಮರಳು) ಘಟಕವನ್ನು ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂಬ ಹುನ್ನಾರ ಇದರ ಹಿಂದೆ ಅಡಗಿತ್ತು ಎಂಬ ಆರೋಪವೂ ಆಗಲೇ ಕೇಳಿ ಬಂದಿತ್ತು. ಪ್ರಮೋದ್ ಮಧ್ವರಾಜ್ ಸಾಂಪ್ರದಾಯಿಕ ಮರಳನ್ನು ಉಡುಪಿ ಜಿಲ್ಲೆಯಲ್ಲಿ ತೆಗೆಯದಂತೆ ತನ್ನ ಉದ್ಯಮದಲ್ಲಿ ಉದ್ಯೋಗಿಯೊಬ್ಬನ್ನು ಛೂ ಬಿಟ್ಟು ಚೆನ್ನೈ ಹಸಿರು ಪೀಠದಲ್ಲಿ ದೂರು ದಾಖಲಿಸಿದ್ದು, ಪೀಠವು ಉಡುಪಿ ಜಿಲ್ಲೆಯಲ್ಲಿ ಮರಳುಗಾರಕೆ ನಡೆಸದಂತೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವುಗೊಳ್ಳಲು ಸುಮಾರು ಒಂದು ವರ್ಷ ಹಿಡಿದಿತ್ತು. ಒಂದು ವರ್ಷ ಕಾಲ ತಡೆಯಾಜ್ಞೆ ಇರುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಹೊರಜಿಲ್ಲೆಯ ಮರಳು ಬೇಕಾಬಿಟ್ಟಿ ದುಪ್ಪಟ್ಟು ಬೆಲೆಗೆ ಕಾಳಸಂತೆಗೆ ಮಾರಾಟವಾಗುತ್ತಿತ್ತು.

ಇದರಿಂದ ಮನೆ ನಿರ್ಮಿಸುವ ಜನಸಾಮಾನ್ಯರು, ಸಾಂಪ್ರದಾಯಿಕ ಮರಳು ಧಕ್ಕೆಗಾರರು, ಮರಳು ಕಾರ್ಮಿಕರು, ಗುತ್ತಿಗೆದಾರರು, ಕಟ್ಟಡ ಕಾರ್ಮಿಕರು, ಮರಳು ಸಾಗಾಟ ಅವಲಂಬಿಸಿರುವ ಟೆಂಪೋ ಚಾಲಕ-ಮಾಲಕರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದರ ವಿರುದ್ಧ ಎರಡೆರಡು ಬಾರಿ ಉಡುಪಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಮೂಲಕ ಉಡುಪಿ ಡೀಸಿ ಕಚೇರಿಯವರೆಗೆ ಹೋಗಿ, ಡೀಸಿಗೆ ಮನವಿ ನೀಡುವ ಘಟನೆಯೂ ನಡೆದಿದೆ. ಬಳಿಕ ನಡೆದ ಬೆಳವಣಿಗೆಯಲ್ಲಿ ಪ್ರಮೋದ್ ಮಧ್ವರಾಜ್ ಸಾಂಪ್ರದಾಯಿಕ ಮರಳು ಧಕ್ಕೆಯವರಿಗೆ ಪರವಾನಿಗೆ ನೀಡದಂತೆ ನೋಡಿಕೊಂಡು ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಪರವಾನಿಗೆ ನೀಡಿದ್ದಾರೆ ಎಂಬ ಆರೋಪವೂ ಆ ವೇಳೆ ಕೇಳಿಬಂದಿತ್ತು.

ಅದೇ ರೀತಿ ಸಮುದ್ರದಲ್ಲಿ ಬೆಳಕಿನ ಮೀನುಗಾರಿಕೆ (ಲೈಟ್ ಫಿಶೀಂಗ್) ನಡೆಸಂತೆ ಕೇಂದ್ರ ಮತ್ತು ರಾಜ್ಯ ಸರಕಾರ ನಿಷೇಧ ಹೇರಿದ್ದರೂ ಪ್ರಮೋದ್ ಮಧ್ವರಾಜ್, ಪರ್ಸಿನ್ ಬೋಟ್ ಮತ್ತು ಆಳಸಮುದ್ರ (ಡೀಪ್ ಸೀ ಫಿಶಿಂಗ್) ಬೋಟಿನವರ ಮಧ್ಯೆ ಒಡಕು ಮೂಡಿಸಿ, ಅವರು ಉಡುಪಿ ಡೀಸಿ ಕಚೇರಿ, ಮಲ್ಪೆಯ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಎದುರು ಎರಡೆರಡು ಬಾರಿ ಪ್ರತಿಭಟನೆ, ಮೀನುಗಾರಿಕಾ ಉಪನಿರ್ದೇಶಕರ ಕಚೇರಿಗೆ ಬೀಗ ಜಡಿಯುವಂತಹ ಸ್ಥಿತಿಗೆ ಎಡೆಮಾಡಿಕೊಟ್ಟಿದ್ದರು.ಪರ್ಸಿನ್ ಮತ್ತು ಆಳ ಸಮುದ್ರ ಬೋಟಿನವರ ಕಿತ್ತಾಟ ಸುಮಾರು ಒಂದೂವರೆ ತಿಂಗಳ ನಡೆಯುತ್ತಿದ್ದರೂ ಪ್ರಮೋದ್ ಮಧ್ವರಾಜ್ ಬಗೆಹರಿಸಿಲ್ಲ, ಆ ವೇಳೆ ಲೈಟ್ ಫಿಶಿಂಗ್ ಮಾಡಿರುವ ಸುಮಾರು 70 ಬೋಟುಗಳು ಜಪ್ತಿಯಾಗಿ ಕೇಸು ದಾಖಲಾಗಿತ್ತು. ಈ ವಿವಾದಕ್ಕೆ ಸುಮಾರು ಒಂದೂವರೆ ತಿಂಗಳ ಬಳಿಕ ಪ್ರಮೋದ್ ಮಧ್ವರಾಜ್ ಮಧ್ಯ ಪ್ರವೇಶಿಸಿದ್ದರು. ಈ ಎರಡು ಘಟನೆಗಳಲ್ಲಿ ತೀವ್ರ ಕಷ್ಟಗೊಳಗಾದವರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಮೀನುಗಾರ ಸಮಾಜದ ಮೂಲಗಳು ತಿಳಿಸಿವೆ.