ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು – vishwanews24

Featured, ದಕ್ಷಿಣ ಕನ್ನಡ

ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ ಹಿನ್ನೆಲೆಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮಹತ್ವದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಇದರ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸುಮಾರು 15 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು ಇಂದು ತಾಂತ್ರಿಕ ಭೇಟಿ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಶ್ರೀ ವಿನೋದ್ ಟಿ. ಡಿಸೋಜಾ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ದೀಕ್ಷಾ ಆನಂದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಜನೆಯ ತಾಂತ್ರಿಕ ಮಾರ್ಗದರ್ಶನ ನೀಡುತ್ತಿರುವ ಎಂಜಿನಿಯರ್ ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ದ್ವಾರವನ್ನು ಸ್ಥಳಾಂತರಿಸುವ ಅಗತ್ಯತೆ, ಅದರ ಐತಿಹಾಸಿಕ ಹಾಗೂ ತಾಂತ್ರಿಕ ಮಹತ್ವ ಮತ್ತು ಕಾಮಗಾರಿಯಲ್ಲಿ ಅನುಸರಿಸಲಾಗುತ್ತಿರುವ ವಿವಿಧ ಹಂತಗಳ ಕುರಿತು ವಿವರಿಸಿದರು.

ಕಟೀಲು  ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ – vishwanews24

ದ್ವಾರವನ್ನು ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ಅದರ ರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಂಡು ಸ್ಥಳಾಂತರಿಸುವುದು ಈ ಯೋಜನೆಯ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೈಚಾಲಿತ ಜ್ಯಾಕ್‌ಗಳ ಸಹಾಯದಿಂದ ಹಂತ ಹಂತವಾಗಿ ಹಾಗೂ ನಿಯಂತ್ರಿತ ರೀತಿಯಲ್ಲಿ ದ್ವಾರವನ್ನು ಎತ್ತುವ ಪ್ರಕ್ರಿಯೆ, ಪ್ರತಿ ಹಂತದ ನಂತರ ನೀಡಲಾಗುವ ತಾತ್ಕಾಲಿಕ ಮತ್ತು ಪಾರ್ಶ್ವದ ಕಲ್ಲಿನ ಬೆಂಬಲ, ರಚನೆಯ ಸ್ಥಿರತೆ ಹಾಗೂ ಸುರಕ್ಷತೆಯ ಮೇಲ್ವಿಚಾರಣೆ ಸೇರಿದಂತೆ ವಿವಿಧ ತಾಂತ್ರಿಕ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ವಿವರಿಸಲಾಯಿತು.

ಈಗಾಗಲೇ ದ್ವಾರವನ್ನು ಒಟ್ಟು 36 ಇಂಚು ಅಂದರೆ 3 ಅಡಿ ಎತ್ತರಕ್ಕೆ ಯಶಸ್ವಿಯಾಗಿ ಎತ್ತಲಾಗಿದ್ದು, ಕಾಮಗಾರಿಯ ಪ್ರಮುಖ ಹಂತವೊಂದು ಪೂರ್ಣಗೊಂಡಿದೆ.

ಮುಂದಿನ ಹಂತದಲ್ಲಿ ದ್ವಾರವನ್ನು ಹೊಸ ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಚಲನಾ ಮಾರ್ಗ (Movement Track) ನಿರ್ಮಾಣ ಹಾಗೂ ಇತರ ತಾಂತ್ರಿಕ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯವಿರುವ ವಿದ್ಯುತ್ ತಂತಿಗಳ ಸ್ಥಳಾಂತರ ಮತ್ತು ಸುರಕ್ಷತಾ ಕ್ರಮಗಳಿಗಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯವೂ ನಡೆಯುತ್ತಿದೆ.

ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ : ಸಿಎಂ ಡಿ.ಕೆ. ಶಿ – vishwanews24

ತಾಂತ್ರಿಕ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಚಾಲಿತ ಜ್ಯಾಕ್ ವ್ಯವಸ್ಥೆ, ಅಡಿಭಾಗದ ಬೆಂಬಲ ವ್ಯವಸ್ಥೆ, ದ್ವಾರವನ್ನು ಹಂತ ಹಂತವಾಗಿ ಎತ್ತುವ ವಿಧಾನ ಹಾಗೂ ಮುಂದಿನ ಸ್ಥಳಾಂತರ ಪ್ರಕ್ರಿಯೆಗಳನ್ನು ನೇರವಾಗಿ ವೀಕ್ಷಿಸಿದರು. ವಿದ್ಯಾರ್ಥಿಗಳು ಯೋಜನೆಯ ಕುರಿತು ಹಲವು ತಾಂತ್ರಿಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

ತರಗತಿಯಲ್ಲಿ ಕಲಿಯುವ ಸಿವಿಲ್ ಎಂಜಿನಿಯರಿಂಗ್ ತತ್ವಗಳನ್ನು ನೈಜ ಕಾಮಗಾರಿ ಸ್ಥಳದಲ್ಲಿ ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಇಂತಹ ತಾಂತ್ರಿಕ ಭೇಟಿಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ವಿಶೇಷವಾಗಿ ಅಸ್ತಿತ್ವದಲ್ಲಿರುವ ಹಾಗೂ ಐತಿಹಾಸಿಕ ರಚನೆಗಳನ್ನು ಸುರಕ್ಷಿತವಾಗಿ ಎತ್ತುವುದು, ಬಲಪಡಿಸುವುದು ಮತ್ತು ಸ್ಥಳಾಂತರಿಸುವಂತಹ ವಿಶೇಷ ಎಂಜಿನಿಯರಿಂಗ್ ಕಾರ್ಯಗಳ ಬಗ್ಗೆ ನೇರ ಅನುಭವ ಪಡೆಯಲು ಈ ಭೇಟಿ ಉತ್ತಮ ಅವಕಾಶವಾಯಿತು.

ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಈ ವಿಶಿಷ್ಟ ಎಂಜಿನಿಯರಿಂಗ್ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ಥಳದಲ್ಲಿಯೇ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸರ್ಕಾರಿ ರಜೆ ಘೋಷಣೆಗೆ ಮನವಿ – vishwanews24

“ತರಗತಿಯ ಜ್ಞಾನವು ನೈಜ ಕಾಮಗಾರಿಯ ಸವಾಲುಗಳೊಂದಿಗೆ ಬೆರೆತಾಗಲೇ ಎಂಜಿನಿಯರಿಂಗ್ ಶಿಕ್ಷಣ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.”

Leave a Reply