ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಪ್ರಿಯಾಂಕ್ ಖರ್ಗೆ – vishwanews24
ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್ವರ್ಕ್ ಸೇವೆಗಳಲ್ಲಿ ಉಂಟಾಗುತ್ತಿರುವ ವ್ಯತ್ಯಯವನ್ನು ಪರಿಹರಿಸಲು ಸರ್ಕಾರ ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಾರಾಗೃಹದ ಆವರಣದಲ್ಲಿ ಅಳವಡಿಸಿರುವ ಮೊಬೈಲ್ ಸಿಗ್ನಲ್ ಜಾಮರ್ಗಳ ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮೊಬೈಲ್ ಸಂಪರ್ಕಕ್ಕೆ ಅಡಚಣೆ ಉಂಟಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ :
ಉಡುಪಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರದ ಚಿಂತನೆ : ಡಿಸಿಎಂ ಡಾ.ಜಿ.ಪರಮೇಶ್ವರ್ – vishwanews24
ಈ ಹಿನ್ನೆಲೆಯಲ್ಲಿ ಜಂಟಿ ತಾಂತ್ರಿಕ ಸಮೀಕ್ಷೆ ನಡೆಸಲಾಗಿದ್ದು, ಅದರ ಆಧಾರದ ಮೇಲೆ ಸಂಬಂಧಿತ ಸಂಸ್ಥೆ ಕಾರಾಗೃಹದ ಭದ್ರತಾ ಅಗತ್ಯಗಳಿಗೆ ಅನುಗುಣವಾಗಿ ಜಾಮರ್ಗಳ ಸಾಮರ್ಥ್ಯ ಮತ್ತು ಆಂಟೆನಾಗಳ ವಿನ್ಯಾಸದಲ್ಲಿ ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿದೆ ಎಂದು ಸಚಿವರು ತಿಳಿಸಿದರು.
ಕಾರಾಗೃಹದೊಳಗೆ ಜಾಮರ್ಗಳು ಭದ್ರತಾ ಉದ್ದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಜೊತೆಗೆ, ಹೊರಗಿನ ಸಾರ್ವಜನಿಕರಿಗೆ ಮೊಬೈಲ್ ನೆಟ್ವರ್ಕ್ ವ್ಯತ್ಯಯ ಸಾಧ್ಯವಾದಷ್ಟು ಕಡಿಮೆಯಾಗುವಂತೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ :
ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ – vishwanews24
ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಮನ್ವಯ ಸಾಧಿಸಿ, ಜಾಮರ್ಗಳಿಂದ ಮೊಬೈಲ್ ಸೇವೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ತಗ್ಗಿಸಲು ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
“ಕಾರಾಗೃಹದ ಭದ್ರತೆ ಅತ್ಯಂತ ಮುಖ್ಯ. ಅದೇ ಸಮಯದಲ್ಲಿ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಮೊಬೈಲ್ ಸಂಪರ್ಕದಲ್ಲಿ ಅನಗತ್ಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದೂ ಸರ್ಕಾರದ ಆದ್ಯತೆಯಾಗಿದೆ. ಈ ಎರಡರ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಜಾರಿಗೊಳಿಸಲಾಗುತ್ತಿದೆ,” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ :
ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್ಗಾಗಿ ಕ್ಯಾಬಿನಟ್ ಸಭೆ : ಯತ್ನಾಳ್ ಲೇವಡಿ – vishwanews24
ಸಂಬಂಧಪಟ್ಟ ಇಲಾಖೆಗಳು ಹಾಗೂ ತಾಂತ್ರಿಕ ಸಂಸ್ಥೆಗಳು ಕಾರಾಗೃಹದ ಭದ್ರತಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಗುಣಮಟ್ಟ ಸುಧಾರಿಸಲು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ.
