ಉಡುಪಿ: ಅಗ್ರಿಗೋಲ್ಡ್ ವಂಚನೆ ಪ್ರಕರಣ ; ಹಣ ವಾಪಸ್ ಸಿಗುವ ವದಂತಿ, ಎಸ್‌ಪಿ ಕಚೇರಿಗೆ ಮುಗಿಬಿದ್ದ ಸಂತ್ರಸ್ತರು -vishwanews24

Featured, ಉಡುಪಿ

ಉಡುಪಿ: ಅಗ್ರಿಗೋಲ್ಡ್ ಕೋಟ್ಯಂತರ ರೂ. ವಂಚನೆ ಪ್ರಕರಣ: ಉಡುಪಿ ಎಸ್ಪಿ ಕಚೇರಿಗೆ ಮುಗಿಬಿದ್ದ ಸಂತ್ರಸ್ತರು 

ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದರು.

ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್ಪಿ ಕಚೇರಿಯಲ್ಲಿ ಕೈಗೊಳ್ಳಲಾಗಿದೆ. ದಿನವೊಂದಕ್ಕೆ 150 ಮಂದಿಯ ದಾಖಲೆ ಸಂಗ್ರಹಿಸಲು ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಆದರೆ ಹಣ ವಾಪಸ್ ಸಿಗಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ನೂರಾರು ಮಹಿಳಾ ಸಂತ್ರಸ್ತೆಯರು ಸೇರಿದಂತೆ ಅನೇಕರು ಕಚೇರಿಗೆ ಧಾವಿಸಿದರು.

ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಆಗಮಿಸಿದ್ದರಿಂದ ಟೋಕನ್ ಪಡೆಯಲು ಗೊಂದಲದ ವಾತಾವರಣ ನಿರ್ಮಾಣವಾಯಿತು. ನಮಗೂ ಟೋಕನ್ ನೀಡಿ ಎಂದು ಮಹಿಳೆಯರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸಂತ್ರಸ್ತರನ್ನು ಸಮಾಧಾನಪಡಿಸಿ, ದಾಖಲೆ ಸಂಗ್ರಹ ಪ್ರಕ್ರಿಯೆಯ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದರು.

ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಕಳೆದುಕೊಂಡವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದು, ತಮ್ಮ ಹೂಡಿಕೆಯ ಹಣ ಮರಳಿ ಸಿಗುವ ನಿರೀಕ್ಷೆಯಲ್ಲಿ ಅನೇಕರು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಹಣ ವಾಪಸಾತಿ ಕುರಿತ ವದಂತಿಯಿಂದಾಗಿ ಸಂತ್ರಸ್ತರಲ್ಲಿ ಗೊಂದಲ ಉಂಟಾಗಿತ್ತು.

Leave a Reply