ಕಟೀಲು : ಯಕ್ಷಗಾನ ಬಯಲಾಟಕ್ಕೆ ಕಾಲಮಿತಿ ; ಜನರ ಧಾರ್ಮಿಕ ನಂಬಿಕೆಗೆ ಘಾಸಿ – ಭಕ್ತರ ಅಸಮಾಧಾನ; ನ. 6ರಂದು ಕಟೀಲಮ್ಮನೆಡೆಗೆ ಭಕ್ತರ ನಡೆ – ಪಾದಯಾತ್ರೆ – Vishwanews24
ಕಟೀಲು ಯಕ್ಷಗಾನ ಬಯಲಾಟವನ್ನು ಕಾಲಮಿತಿಗೊಳಪಡಿಸಿರುವ ನಿರ್ಧಾರಕ್ಕೆ ಅಸಮಾಧಾನ
ಕಟೀಲು ತಾಯಿ ರಾತ್ರಿ ಪೂಜೆಯ ನಂತರ ಕಟೀಲು ಮೇಳದ ಆಟ ವೀಕ್ಷಿಸಲು ತೆರಳುತ್ತಾಳೆ ಎಂಬುದು ನಂಬಿಕೆ
ನ.6ರಂದು ಬಜಪೆಯಿಂದ ಕಟೀಲಿಗೆ ಪಾದಯಾತ್ರೆ
ಮಂಗಳೂರು: ಯಕ್ಷಗಾನದ ಪಾರಂಪರಿಕ ಮೇಳವೆಂದೇ ಖ್ಯಾತವಾಗಿರುವ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತಾದಿಗಳ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಬೇಕೆಂದು ಆಗ್ರಹಿಸಿ ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿಯ ಸದಸ್ಯರು ನ.6ರಂದು ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ `ಕಟೀಲಮ್ಮನೆಡೆಗೆ ಭಕ್ತರ ನಡೆ’ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಶ್ರೀ ಕಟೀಲು ಕ್ಷೇತ್ರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರು (ಕಟೀಲು ಮೇಳ) ಆಡಿ ತೋರಿಸಲಿರುವ ಯಕ್ಷಗಾನವು ಶ್ರೀ ಕಟೀಲು ಅಮ್ಮನವರಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಸೇವೆಯಾಗಿದೆ.

ತಮಿಳುನಾಡು: ಮನೆಯಲ್ಲಿ ಫ್ರಿಡ್ಜ್ ಸ್ಪೋಟ..
ದೇವಸ್ಥಾನದ ಮೇಳದವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ರಾತ್ರಿ ಯಕ್ಷಗಾನ ಸೇವೆಯಾಟಗಳನ್ನು ಏಕಪಕ್ಷೀಯವಾಗಿ ದಿಢೀರಾಗಿ ಸಂಜೆ 4.30ರಿಂದ ರಾತ್ರಿ 10ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಮುಂದೆ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದೇವಳದ ಆತುರದ ನಿರ್ಧಾರ ಭಕ್ತಾದಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ತಿಳಿಸಿದ್ದಾರೆ.
ಭಕ್ತಾದಿಗಳು ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿ ತ್ವರಿತ ಪರಿಹಾರವಾದಲ್ಲಿ ತಮ್ಮ ಕ್ಷೇತ್ರದಲ್ಲಿ ಬಯಲಾಟ ಆಡಿಸುವುದಾಗಿ ಹರಕೆ ಹೊತ್ತು ಊರಿನ ಹತ್ತು ಸಮಸ್ಥರು ಗ್ರಾಮದಲ್ಲಿ ದುಷ್ಟಾರಿಷ್ಟಗಳು ಕಳೆದು ಗ್ರಾಮ, ರಾಷ್ಟ್ರಕ್ಕೆ ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸಿ ಭಕ್ತಿ ಪುರಸ್ಸರವಾಗಿ ಶ್ರದ್ಧಾ ಭಕ್ತಿ ನಂಬಿಕೆ ಭಾವಪರವಶತೆಯಿಂದ ಪರಂಪರಾಗತವಾಗಿ ತುಳುನಾಡಿನ ಮಣ್ಣಿನ ಪ್ರತೀತಿಯಂತೆ ಸಮರ್ಪಿಸುವ ಸೇವೆ ಯಕ್ಷಗಾನ, ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ.
ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ. ಮಾತ್ರವಲ್ಲ ಪರಂಪರೆಗೆ ಧಕ್ಕೆ ತಂದಿದೆ. ಕಾಲಮಿತಿ ಆಟವಾದರೆ ಈ ಬಾರಿಯಿಂದಲೇ ಸೇವಾ ಬಯಲಾಟವನ್ನು ನಿಲ್ಲಿಸೋಣ ಎಂಬ ಪತ್ರಗಳನ್ನು ಈಗಾಗಲೇ ಸಂಬಂಧಿತರಿಗೆ ತಲುಪಿಸಿರುವ ಬಗ್ಗೆ ಮಾಹಿತಿ ಇದೆ. ಮತ್ತಷ್ಟು ಹತ್ತು ಸಮಸ್ತರು ವರ್ಷಂಪ್ರತಿ ನಡೆಸಲಿರುವ ಸೇವೆಯನ್ನು ಬೇರೆ ಮೇಳಗಳಿಂದ ಮಾಡಿಸುವ ಯಾ ಶ್ರೀದೇವಿಗೆ ಕಾಣಿಕೆ ಹಾಕಿ ಪ್ರಾರ್ಥಿಸುವ ಯಾ ಇನ್ನಿತರ ವಿಧಗಳಲ್ಲಿ ಹರಕೆ ತೀರಿಸಲು ನಿರ್ಧರಿಸಿರುವುದು ಗಮನಕ್ಕೆ ಬಂದಿದೆ.
ಅರ್ಧಂಬರ್ಧ ಸೇವೆ ಮಾಡುವುದಕ್ಕಿಂತ ಸೇವೆಯನ್ನು ನಿಲ್ಲಿಸೋಣ ಎಂದು ಹೇಳುತ್ತಿರುವುದು ನೊಂದ ಭಕ್ತರ ಮನದಾಳದ ನೋವನ್ನು ವ್ಯಕ್ತಪಡಿಸುತ್ತದೆ. ಯಾವುದೇ ಕಾರಣಕ್ಕೂ ಯಕ್ಷಗಾನ ಸೇವೆಯನ್ನು ಮೊಟಕುಗೊಳಿಸಿ ಶ್ರೀದೇವಿಗೆ ಅರ್ಪಿಸುವ ಸೇವೆಯಲ್ಲಿ ನ್ಯೂನತೆ ಅಪಚಾರ ಸಲ್ಲದು ಎಂದು ಸೇವಾದಾರರು ವಾದಿಸುತ್ತಿದ್ದಾರೆ.

ಬಜಪೆಯಿಂದ ಕಟೀಲಿಗೆ ಪಾದಯಾತ್ರೆ
ಕಟೀಲು ಮೇಳದವರ ಈ ಆಘಾತಕಾರಿ ನಿರ್ಧಾರದಿಂದ ನೊಂದ ಸಹಸ್ರಾರು ಭಕ್ತಾದಿಗಳು ನಮ್ಮ ಸಮಿತಿಯ ನೇತೃತ್ವದಲ್ಲಿ, ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಲೇಬೇಕು ಎಂದು ಆಗ್ರಹಿಸಿ ದಿನಾಂಕ 06.11.2022ರಂದು ಬೆಳಿಗ್ಗೆ 8.30 ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆಯನ್ನು ನಡೆಸಲಿದ್ದೇವೆ. ಹಾಗೂ ಶ್ರೀದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವವರಿದ್ದೇವೆ. ಕಾರ್ಯಕ್ರಮದಲ್ಲಿ 8000 ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಅಂದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಕೃಷ್ಣಾಪುರ, ಲೋಕನಾಥ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಪಿ.ಸುಧಾಕರ ಕಾಮತ್, ಮೋಹನ್ ಶೆಟ್ಟಿ ಬಜಪೆ, ದುರ್ಗಾಪ್ರಸಾದ್ ಹೊಳ್ಳ ಹರೀಶ್ ಶೆಟ್ಟಿ, ಮರಕಡ ಗುರುಪ್ರಸಾದ್ ಹೊಳ್ಳ, ಪಾಂಡುರಂಗ ಕುಕ್ಯಾನ್ ಅಣ್ಣಪ್ಪ ದೇವಾಡಿಗಉಪಸ್ಥಿತರಿದ್ದರು.
ನ.7ರಂದು ಉಡುಪಿಗೆ ಸಿಎಂ ಬೊಮ್ಮಾಯಿ.. ಕಾಪುವಿನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿ – Vishwanews24
