ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ ; ಮಹಿಳೆ ಸಾವು – Vishwanews24
ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ ; ಮಹಿಳೆ ಸಾವು – Vishwanews24
ಹಾಸನ: ಪೂಜಾರಿಯೋರ್ವ ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪಾರ್ವತಿ (47) ಎಂದು ಗುರುತಿಸಲಾಗಿದೆ.
ಪಾರ್ವತಿ ಎಂಬವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದ ಹಿನ್ನೆಲೆ ಗ್ರಾಮದ ಪಿರಿಯಾಪಟ್ಟಣದ ದೇವರ ಪೂಜಾರಿ ಮಧು ಎಂಬವರ ಬಳಿ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ ಮಹಿಳೆಗೆ ಬೆತ್ತದಿಂದ ಹೊಡೆದಿದ್ದು, ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಪಾರ್ವತಿಯವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ತಲೆಗೆ ಹೊಡೆದ ಒಂದೇ ಏಟಿಗೆ ಪಾರ್ವತಿಯವರು ತೀವ್ರ ಅಸ್ವಸ್ಥಗೊಂಡಿದ್ದು, ಈ ವೇಳೆ ನಿಂಬೆ ರಸ ಕುಡಿಸಿ ಖಾಯಿಲೆ ಗುಣವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ಪೂಜಾರಿ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ನಂತರ ಪೂಜಾರಿ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
