ಮೋದಿ ಹವ.. ಮಂಗಳೂರಲ್ಲಿ ಸೇರಿದ ಕೇಸರಿಪಡೆ
ರಾಜ್ಯದ ಕರಾವಳಿಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತೇವೆ, ಮಂಗಳೂರಿನ ಸಮುದ್ರ ತೀರ ಅಭಿವೃದ್ಧಿಗಾಗಿ ಇಲ್ಲಿ ಬ್ಲೂ ರೆವಲ್ಯೂಶನ್ (ನೀಲಿಕ್ರಾಂತಿ) ಯೋಜಿಸಿದ್ದೇವೆ, ಸಮುದ್ರ ತಟದಲ್ಲಿನ ಬಂದರು ಭೂಮಿ ಪ್ರಗತಿಗಾಗಿ ಹೆದ್ದಾರಿಯನ್ನು ಬೆಸೆಯಲಾಗುವುದು, ವ್ಯಾಪಾರ ಅಭಿವೃದ್ಧಿಗಾಗಿ ಪ್ರಮುಖ ಬಂದರುಗಳ ಸಂಪರ್ಕದ ಸಾಗರಮಾಲಾ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಜ್ಯದಲ್ಲಿ ಶನಿವಾರ ತಮ್ಮ ನಾಲ್ಕನೇ ಕಾರ್ಯಕ್ರಮವಾಗಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮೋದಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿ, 8 ಬಂದರುಗಳ ಸಾಮರ್ಥ್ಯ ವರ್ಧನೆ ಮಾಡುವುದಕ್ಕಾಗಿ 3000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಹಾಕಿದ್ದು ಇದು 2025ಕ್ಕೆ ಪೂರ್ಣಗೊಳ್ಳಲಿದೆ. ಬೇಲೆಕೇರಿಯಲ್ಲಿ ನೂತನ ಬಂದರು ನಿರ್ಮಾಣವಾಗಲಿದೆ, 1000 ಕೋಟಿಯ ಕನಿಷ್ಠ 50 ಯೋಜನೆಗಳು ಕಾರ್ಯಗತವಾಗುತ್ತಿವೆ ಎಂದರು.
ಮೀನುಗಾರರ ಬದುಕು ಸುಧಾರಣೆಗಾಗಿ ಕ್ರಮ ಕೈಗೊಳ್ಳಲಾಗುತ್ತದೆ, 4 ಮೀನುಗಾರಿಕಾ ಬಂದರುಗಳ ನಿರ್ಮಾಣವಾಗಲಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೆಸ್ತರಿಗೆ ಡೀಪ್ ಸೀ ಬೋಟ್ ಖರೀದಿಗೆ ಹಣಕಾಸು ನೆರವು ನೀಡಲಾಗುವುದು ಎಂದರು.
ಯುವಜನಸಾಗರ: ಸಮಾವೇಶದಲ್ಲಿ ಭಾಗಿಯಾದವರಲ್ಲಿ ಯುವಕರೇ ಅಧಿಕ. ಕೇಸರಿ ಟಿ ಶರ್ಟ್, ಕೇಸರಿ ಶಾಲು ಧರಿಸಿ, ಬಿಜೆಪಿ ಧ್ವಜ ಹಿಡಿದು ಬಂದವರಲ್ಲಿ ಶೇ.75ರಷ್ಟು ಯುವ ಸಮುದಾಯದವರಿದ್ದರು. ಮಹಿಳೆಯರು ಮತ್ತು ಮಧ್ಯ ವಯಸ್ಕರು ಸಮಾವೇಶಲ್ಲಿ ಚದುರಿದಂತಿದ್ದರು. ಮಹಿಳೆಯರೂ ಕೇಸರಿ ಸೀರೆ ಹಾಗೂ ಹೆಗಲಲ್ಲಿ ಶಾಲು ಧರಿಸಿದ್ದರು. ಮೈದಾನವಿಡೀ ಕೇಸರಿಮಯವಾಗಿತ್ತು.
ಕುಟುಂಬ ರಾಜಕೀಯ: ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿ ಮಾತನಾಡಿದ ಸುಭಾಸ್‌ಚಂದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ಪಟೇಲ್, ಸಿ.ರಾಜಗೋಪಾಲಚಾರಿ, ಕರ್ನಾಟಕದ ಎಸ್.ನಿಜಲಿಂಗಪ್ಪ ಇವರೆಲ್ಲ ದಿಗ್ಗಜರಾದರೂ ನಿರ್ನಾಮಗೊಂಡರು. ತಾಯಿ ಬಳಿಕ ಮಗನ ಅಧಿಕಾರದ ವಿರುದ್ಧ ಸ್ವರ ಎತ್ತಿದ ದೇವರಾಜ ಅರಸರನ್ನು ಹೊರಹಾಕಿದರು, ವೀರೇಂದ್ರ ಪಾಟೀಲ್ ನೇತೃತ್ವದ ತಮ್ಮದೇ ಸರ್ಕಾರದ ವಿರುದ್ಧ ರಾಜೀವ್ ಗಾಂಧಿ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು ಮೋದಿ ನೆನಪಿಸಿದರು.
ಅಡಕೆ ಬೆಳೆಗಾರರ ರಕ್ಷಣೆ: ದೇಶದಲ್ಲೇ ಅತ್ಯಧಿಕ ಪ್ರಮಾಣದ ಅಡಕೆ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ, ಕಾಂಗ್ರೆಸ್ ಸರ್ಕಾರ ಮಾತ್ರ ಅಡಕೆ ಆರೋಗ್ಯಕ್ಕೆ ಹಾನಿಕರವೆಂದು ಅಫಿಡವಿಟ್ ಸಲ್ಲಿಸಿತ್ತು, ಆದರೆ ರೈತರ ವಿರೋಧದಿಂದ ಯುಟರ್ನ್ ಹೊಡೆದಿತ್ತು. ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ರೈತರ ಅಭಿವೃದ್ಧಿಗೆ ಎಂದೂ ಹಿಂದೆ ಹೆಜ್ಜೆಯಿಡುವುದಿಲ್ಲ. ಕೇಂದ್ರ ಸರ್ಕಾರ ಎಂದೆಂದಿಗೂ ಅಡಕೆ ಬೆಳೆಗಾರರ ಪರವಾಗಿ ಇರುತ್ತದೆ ಎಂದು ಮೋದಿ ಹೇಳಿದರು.
ನಾರಿ ವಿರೋಧಿ ಕಾಂಗ್ರೆಸ್ : ತ್ರಿವಳಿ ತಲಾಕ್‌ನಿಂದಾಗಿ ಮುಸ್ಲಿಂ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂಬುದು ಅರಿವಾಗಿ ನಾವು ಅದನ್ನು ನಿಷೇಧಿಸಿ ಕಾನೂನು ತಂದೆವು, ಲೋಕಸಭೆಯಲ್ಲಿ ಅದು ಅನುಮೋದನೆ ಪಡೆದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಡ್ಡಿಪಡಿಸಿತು, ಹಾಗಾಗಿ ಕಾಂಗ್ರೆಸ್ ನಾರಿ ವಿರೋಧಿ ಎಂದು ಮೋದಿ ಜರೆದರು.
ಕರ್ನಾಟಕ ಜನತೆಯ ಹೃದಯ ತೀರ್ಪು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲು ನಿಶ್ಚಿತ ಎಂಬ ಹೆದರಿಕೆ ಕಾಂಗ್ರೆಸ್‌ಗೆ ಶುರುವಾಗಿದೆ, ಅದಕ್ಕಾಗಿ ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ಎಂದು ಜಪಿಸುವ ಮೂಲಕ ಕಾಂಗ್ರೆಸ್ ಮತದಾರರ ಉತ್ಸಾಹ ಭಂಗಗೊಳಿಸುವ ಯತ್ನ ಮಾಡುತ್ತಿದೆ ಎಂದು ಮೋದಿ ಟೀಕಾಪ್ರಹಾರ ನಡೆಸಿದರು.
ಸೋಲಿನ ಭಯದಲ್ಲಿರುವ ಕಾಂಗ್ರೆಸ್ ತ್ರಿಶಂಕು ಅಸೆಂಬ್ಲಿ ಎನ್ನುತ್ತಿದೆ, ಆದರೆ ಜನತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಲಿಷ್ಠ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವುದು ನಿಶ್ಚಿತ. ಅದಕ್ಕಾಗಿ ಮನೆ ಮನೆಗೆ ತೆರಳಿ ಜನರನ್ನು ಮತದಾನಕ್ಕೆ ಕರೆತನ್ನಿ, ಹೊಸ ಸ್ವಾತಂತ್ರೃದ ಹಬ್ಬದ ರೀತಿಯಲ್ಲಿ ಮತದಾನ ನಡೆಯಲಿ ಎಂದು ನುಡಿದರು.
ರಾಜಕೀಯ ಪಂಡಿತರು ಇನ್ನು ಕೂಡಾ ಕರ್ನಾಟಕದ ಚುನಾವಣೆ ಹಾಗೂ ಫಲಿತಾಂಶದ ಬಗ್ಗೆ ಅನುಮಾನಗಳಿದ್ದರೆ ಜನರ ಉತ್ಸಾಹವನ್ನು ಬಂದು ನೋಡಬೇಕು, 15ರಂದು ಬಿಜೆಪಿ ಪರವಾದ ಫಲಿತಾಂಶ ನಿಶ್ಚಿತವಾಗಿದೆ, ಕರ್ನಾಟಕದ ಜನತೆಯ ಹೃದಯದಿಂದ ಬಂದಿರುವ ತೀರ್ಪು ಇದಾಗಲಿದೆ ಎಂದರು.
ಕಾಂಗ್ರೆಸ್‌ಗೆ ಕುಟುಂಬ ಬಿಟ್ಟರೆ ಬೇರೆ ಇಲ್ಲ: ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿ ಮಾತನಾಡಿದ ಸುಭಾಸ್‌ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ಪಟೇಲ್, ಸಿ.ರಾಜಗೋಪಾಲಚಾರಿ, ಕರ್ನಾಟಕದ ಎಸ್.ನಿಜಲಿಂಗಪ್ಪ ಇವರೆಲ್ಲ ದಿಗ್ಗಜರಾದರೂ ನಿರ್ನಾಮಗೊಂಡರು. ತಾಯಿ ಬಳಿಕ ಮಗನ ಅಧಿಕಾರದ ವಿರುದ್ಧ ಸ್ವರ ಎತ್ತಿದ ದೇವರಾಜ ಅರಸರನ್ನು ಹೊರಹಾಕಿದರು, ವೀರೇಂದ್ರ ಪಾಟೀಲ್ ನೇತೃತ್ವದ ತಮ್ಮದೇ ಸರ್ಕಾರದ ವಿರುದ್ಧ ರಾಜೀವ್ ಗಾಂಧಿ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು ಮೋದಿ ನೆನಪಿಸಿದರು.
ಮೋದಿ ಲೆಕ್ಕ: ರಾಜ್ಯದಲ್ಲಿ 1,81,000 ಮನೆ ನಿರ್ಮಾಣದ ಯೋಜನೆಗೆ ಕೇಂದ್ರ ಸರ್ಕಾರ ಹಣವನ್ನೂ ನೀಡಿದೆ, ಆದರೆ ಮೋದಿಯ ದೃಷ್ಟಿಯಲ್ಲಿರುವ, ಮೋದಿ ಲೆಕ್ಕ ಕೇಳುವ ಯೋಜನೆ ಕರ್ನಾಟಕದಲ್ಲಿ ನಡೆಯುವುದಿಲ್ಲ, ಕೇವಲ 30 ಸಾವಿರ ಮನೆಗಳಷ್ಟೇ ಕಷ್ಟದಲ್ಲಿ ನಿರ್ಮಾಣಗೊಂಡಿವೆ.
ದೆಹಲಿಯಲ್ಲಿ ಹೊರಟ ಒಂದು ರೂಪಾಯಿ ಜನರತ್ತ ಸೇರುವಾಗ 15 ಪೈಸೆಯಾಗುತ್ತದೆ ಎಂದು ಹಿಂದೆ ರಾಜೀವ್ ಗಾಂಧಿ ಹೇಳಿದ್ದರು, ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಸರ್ಕಾರವಿತ್ತು, ಹಾಗಿದ್ದರೆ ಯಾವ ಹಸ್ತ ಈ ಒಂದು ರೂ.ನಲ್ಲಿ 85 ಪೈಸೆಯನ್ನು ನುಂಗುತ್ತಿತ್ತು?
80,000 ಕೋಟಿ ರೂ.ಗಿಂತ ಹೆಚ್ಚು ಹಣ ಸರ್ಕಾರ ಖಜಾನೆಯಿಂದ ಲೂಟಿಯಾಗುತ್ತಿತ್ತು, ಆದರೆ ಬಡವರ, ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಿಂದಾಗಿ ದಲ್ಲಾಳಿಗಳ ಪಾಲಾಗದೆ ಹಣ ಬಡವರಿಗೆ ಸಲ್ಲುತ್ತಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಮತ್ತೆ ಬಂದರೆ ಕಲ್ಲುರ್ಟಿ ಕೋಲ ನಡೆಯದು: ಸಿದ್ದರಾಮಯ್ಯ ಸರ್ಕಾರ ಹಿಂದುಗಳನ್ನು ಒಡೆದು ಆಳುವ ಕೆಟ್ಟ ರಾಜಕೀಯ ಮಾಡಿದೆ. ಹಿಂದು ಯುವಕರ ದಾರುಣ ಹತ್ಯೆಗೆ ಸರ್ಕಾರ ಕಾರಣವಾಗಿದೆ. ಮೂಢನಂಬಿಕೆ ನೆಪದಲ್ಲಿ ಹಿಂದು ಭಾವನೆಗಳನ್ನು ಹತ್ತಿಕ್ಕುವ ಕಾರ್ಯ ನಡೆದಿದೆ. ಮತ್ತೆ ಕಾಂಗ್ರೆಸ್ ಬಂದರೆ ಕರಾವಳಿಯಲ್ಲಿ ಕಲ್ಲುರ್ಟಿ ಕೋಲ ನಡೆಯುವುದಿಲ್ಲ. ಯಾವುದೇ ಭೂತಾರಾಧನೆ ನಡೆಯುವುದಿಲ್ಲ. ಅದಕ್ಕೂ ಅಡ್ಡಿ ಪಡಿಸುತ್ತಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ತುಳುನಾಡ ಶೈಲಿ ಗೌರವ ಧರ್ಮಸ್ಥಳ ಕ್ಷೇತ್ರದ ಪ್ರಸಾದ: ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳೂರಿನಲ್ಲಿ ತುಳುನಾಡ ಶೈಲಿಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು. ಬಿಜೆಪಿ ಹಿರಿಯ ನಾಯಕ ರುಕ್ಮಯ ಪೂಜಾರಿ ಶಾಲು ಹೊದಿಸಿದರೆ, ಸುಳ್ಯ ಶಾಸಕ ಎಸ್.ಅಂಗಾರ ಪೇಟ ತೊಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಲ್ಲಿಗೆ ಹಾರಾರ್ಪಣೆಗೈದರು. ಅಡಕೆ ಬೆಳೆಗಾರರ ಬಗ್ಗೆ ವಿಶೇಷ ಮಮಕಾರ ಹೊಂದಿರುವ ಪ್ರಧಾನಿಗೆ ಅಡಕೆಯಿಂದ ತಯಾರಿಸಿದ ಬೃಹತ್ ಹಾರವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಹಾಕಿದರು. ಮಹಾಲಸಾ ಚಿತ್ರಕಲಾ ಶಾಲೆ ವಿದ್ಯಾರ್ಥಿನಿ ಸೌಮ್ಯಾ ಭಟ್ ರಚಿಸಿದ ಕಿನ್ನಾಳ ಕಲೆಯ ಯಕ್ಷಗಾನ ಮುಖವರ್ಣಿಕೆಯನ್ನು ಸ್ಮರಣಿಕೆಯಾಗಿ ಹಸ್ತಾಂತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಅವರು ಮೋದಿಯವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ಹಸ್ತಾಂತರಿಸಿದರು.
ಮೋದಿ ತುಳು ಭಾಷಣ.. ಕೋಟಿ ಚೆನ್ನಯ,ನಾರಾಯಣಗುರು, ರಾಣಿ ಅಬ್ಬಕ್ಕರ ಸ್ಮರಣೆ: ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಲೆನ ಚರಣೊಗು ಎನ್ನ ಭಕ್ತಿದ ನಮನೊಲು. ತುಳುನಾಡುದ ಜನಕುಲೆಗ್ ಎನ್ನ ಪ್ರೀತಿದ ನಮಸ್ಕಾರೊಲು ಎಂದು ತುಳುವಿನಲ್ಲೇ ಮೋದಿ ಭಾಷಣ ಆರಂಭಿಸಿದರು. ತುಳುನಾಡಿನ ವೀರ ಸಹೋದರರಾದ ಕೋಟಿ ಚೆನ್ನಯ, ರಾಣಿ ಅಬ್ಬಕ್ಕ, ಸಮಾಜ ಸುಧಾಕರ ನಾರಾಯಣ ಗುರು, ಸ್ವಾತಂತ್ರೃ ಸೇನಾನಿ ಕಾರ್ನಾಡು ಸದಾಶಿವ ರಾವ್ ಸಹಿತ ಎಲ್ಲ ಮಹನೀಯರಿಗೆ ನನ್ನ ನಮನಗಳು ಎಂದು ಕನ್ನಡದಲ್ಲೂ ಮಾತನಾಡಿದ ಬಳಿಕ ಹಿಂದಿಯಲ್ಲಿ ತನ್ನ ಎಂದಿನ ಶೈಲಿಯಲ್ಲಿ ಭಾಷಣ ಮುಂದುವರಿಸಿದರು.
ಹತ್ತಿರದ ನಂಟು: ಮಂಗಳೂರಿಗೂ ಪ್ರಧಾನಿ ನರೇಂದ್ರ ಮೋದಿಗೂ ಹತ್ತಿರದ ನಂಟು. ಪ್ರಧಾನ ಮಂತ್ರಿಯಾದ ಬಳಿಕ ಅವರದ್ದಿದು ಐದನೇ ಭೇಟಿ. ಇದಕ್ಕೂ ಮೊದಲು ನಗರದ ಕೇಂದ್ರ ಮೈದಾನ ಸಹಿತ ಜಿಲ್ಲೆಯ ಹಲವೆಡೆ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಮೋದಿ ಕೇಂದ್ರ ಮೈದಾನದಲ್ಲಿ ಪ್ರಧಾನಿಯಾಗಿ ಮೊದಲನೇ ಭಾಷಣ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರವೂ ಮೋದಿ ಅಲೆಯಲ್ಲಿ ತೇಲಾಡಿತ್ತು, ಇದೀಗ ವಿಧಾನಸಭಾ ಚುನಾವಣಾ ಪ್ರಚಾರವೂ ಅದೇ ಗುಂಗಿನಲ್ಲಿ ಸಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ ಉಡುಪಿಗೆ ಆಗಮಿಸಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದ್ದ ಮೋದಿ ಈಗ ಮಂಗಳೂರಿನಲ್ಲೂ ಪಕ್ಷಕ್ಕೆ ಶಕ್ತಿ ತುಂಬಲು ಯತ್ನಿಸಿದ್ದಾರೆ. ಮೋದಿ ಭಾಷಣ ಆಲಿಸಲೆಂದೇ ನೂರಾರು ಕಿ.ಮೀ. ದೂರದಿಂದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳು ಮಂಗಳೂರಿನತ್ತ ಆಗಮಿಸಿದ್ದಾರೆ. ಹಲವು ದಿನಗಳಿಂದ ನೂರಾರು ಕಾರ್ಯಕರ್ತರು, ನಾಯಕರು ಸಮಾವೇಶಕ್ಕೆ ನಡೆಸಿದ್ದ ಸಿದ್ಧತೆಯ ಅಮೂರ್ತ ಕ್ಷಣಗಳಿಗೆ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಜಿಲ್ಲೆಯ ರಾಜಕೀಯ ವಾತಾವರಣ ಬದಲಾಗುವ ನಿರೀಕ್ಷೆಯಲ್ಲಿದೆ ಬಿಜೆಪಿ.
ಮಧ್ಯಾಹ್ನದಿಂದಲೇ ಜನಹರಿವು: ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ಸಾಯಂಕಾಲ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಗೆ ಜಿಲ್ಲೆಯ ಉದ್ದಗಲದಿಂದ ಸಹಸ್ರಾರು ಮಂದಿ ಭಾಗವಹಿಸಿದ್ದರು. ಸಂಘಟಕರ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು. ಹೊರ ಜಿಲ್ಲೆಗಳಿಂದಲೂ ಪಕ್ಷದ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಆಗಮಿಸಿದ್ದರು. ಮಧ್ಯಾಹ್ನದಿಂದಲೇ ಜನರು ನಗರ ಪ್ರವೇಶಿಸಲಾರಂಭಿಸಿದ್ದು, ಸಾಯಂಕಾಲ ಮೋದಿ ಭಾಷಣ ಆರಂಭಿಸುವ ತನಕ ಕಾರ್ಯಕರ್ತರು ಬರುತ್ತಲೇ ಇದ್ದರು. ಮೈದಾನ ಜನರಿಂದ ಭರ್ತಿಯಾಗಿತ್ತು. ಆರ್‌ಟಿಒ ಮುಂಭಾಗದ ಚತುಷ್ಪಥ ರಸ್ತೆಯಲ್ಲೂ ಜಮಾಯಿಸಿದ್ದರು. ಮೈದಾನದ ಇಕ್ಕೆಲಗಳಲ್ಲಿ ನಿಂತು ಜನ ಮೋದಿ ಭಾಷಣ ಆಲಿಸಿದರು.
ಅನುರಣಿಸಿದ ಮೋದಿ ಜೈಕಾರ: ಮೈದಾನದವಿಡೀ ಮೋದಿ.. ಮೋದಿ.. ಮೋದಿ ಜೈಕಾರ ಮುಗಿಲು ಮುಟ್ಟಿತ್ತು. ಮೋದಿ ಆಗಮಿಸಿ ವೇದಿಕೆ ಏರುತ್ತಿದ್ದಂತೆ ಮೋದಿ ಅವರಿಗೆ ಜೈಕಾರ ಇನ್ನಷ್ಟು ಹೆಚ್ಚಾಯಿತು. ಯುವಕರು ಮೋದಿಯ ಮುಖವಾಡ ಧರಿಸಿ ಓಡಾಡುತ್ತಿದ್ದರು. ಆರಂಭದಿಂದ ಸಮಾವೇಶ ಮುಗಿಯುವ ತನಕ ಜನ ಬರುತ್ತಲೇ ಇದ್ದರು. ಮೋದಿಗೆ ಜೈಕಾರ ಮುಗಿಲು ಮುಟ್ಟುವಂತಿತ್ತು. ಬಸ್, ವ್ಯಾನ್, ಜೀಪು, ಕಾರುಗಳಲ್ಲಿ ಆಗಮಿಸಿದ ಕಾರ್ಯಕರ್ತರು ಬಿಜೆಪಿಗೆ ಹಾಗೂ ನರೇಂದ್ರ ಮೋದಿಗೆ ಜೈಕಾರ ಕೂಗುತ್ತಾ ಆಗಮಿಸಿದರು. ಬಿಜೆಪಿಯ ಬೃಹತ್ ಧ್ವಜ ಹಿಡಿದುಕೊಂಡು ಗುಂಪು ಗುಂಪಾಗಿ ಮೈದಾನ ಪ್ರವೇಶಿಸಿದರು. ಬೈಕ್ ರ‌್ಯಾಲಿ ಮೂಲಕ ಯುವಕರು ಸಾಗಿ ಬಂದಾಗ ಮೋದಿ ಹರ್ಷೋದ್ಗಾರ ಕೇಳಿ ಬಂತು.
ಪ್ರಧಾನಿಯಾಗಿ ಪ್ರಥಮ ಸಮಾವೇಶ:ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮಂಗಳೂರಿನಲ್ಲಿ ಪ್ರಥಮ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. 2013ರ ವಿಧಾನಸಭಾ ಹಾಗೂ 2014ರ ಲೋಕಸಭಾ ಚುನಾವಣೆ ಸಂದರ್ಭ ಗುಜರಾತ್ ಮುಖ್ಯಮಂತ್ರಿಯಾಗಿ ಭಾಗವಹಿಸಿದ್ದ ಮೋದಿ, ಆ ಬಳಿಕ ಹಲವು ಬಾರಿ ಮಂಗಳೂರಿಗೆ ಆಗಮಿಸಿದ್ದರೂ, ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ. 2014ರ ಲೋಕಸಭಾ ಚುನಾವಣೆ ಸಂದರ್ಭ ದಾಖಲೆ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಮೋದಿಗೆ ತುಳುನಾಡ ಶೈಲಿ ಗೌರವ: ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳೂರಿನಲ್ಲಿ ತುಳುನಾಡ ಶೈಲಿಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು. ಬಿಜೆಪಿ ಹಿರಿಯ ಮುಖಂಡ ರುಕ್ಮಯ ಪೂಜಾರಿ ಶಾಲು ಹೊದಿಸಿದರೆ, ಸುಳ್ಯ ಶಾಸಕ ಎಸ್.ಅಂಗಾರ ಪೇಟ ತೊಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಲ್ಲಿಗೆ ಹಾರಾರ್ಪಣೆಗೈದರು. ಅಡಕೆ ಬೆಳೆಗಾರರ ಬಗ್ಗೆ ವಿಶೇಷ ಮಮಕಾರ ಹೊಂದಿರುವ ಪ್ರಧಾನಿಗೆ ಸುಪಾರಿಯಿಂದ ತಯಾರಿಸಿದ ವಿಶೇಷ ಮಾಲೆ ಹಾಕಲಾಯಿತು. ಮಹಾಲಸಾ ವಿದ್ಯಾರ್ಥಿನಿ ಸೌಮ್ಯಾ ರಚಿಸಿದ ತೆಂಕುತಿಟ್ಟಿನ ಬಣ್ಣದ ವೇಷದ ಮುಖವರ್ಣಿಕೆಯನ್ನು ಸ್ಮರಣಿಕೆಯಾಗಿ ಹಸ್ತಾಂತರಿಸಿದರೆ, ಉಡುಪಿಯಲ್ಲಿ ಸಮರ್ಪಿಸಿದ್ದ ಬಡಗುತಿಟ್ಟಿನ ಯಕ್ಷಗಾನ ಕೇದಗೆ ಮುಂದಲೆಯ ಫೋಟೋವನ್ನು ಸಮರ್ಪಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಅವರು ಮೋದಿಯವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಸಾದ ಹಸ್ತಾಂತರಿಸಿದರು.
