ರನ್ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ – vishwanews24
ರನ್ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ
ಅಹಮದಾಬಾದ್,: ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಸಮಯೋಚಿತ ಕ್ರಮದಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಪ್ಪು ಮಾರ್ಗಕ್ಕೆ ಪ್ರವೇಶಿಸಿದ್ದ ಏರ್ ಇಂಡಿಯಾ ವಿಮಾನ ಮತ್ತು ಟೇಕ್ಆಫ್ಗೆ ಸಜ್ಜಾಗಿದ್ದ ಇಂಡಿಗೋ ವಿಮಾನ ಕೇವಲ 200 ಮೀಟರ್ ಅಂತರದಲ್ಲಿ ಮುಖಾಮುಖಿಯಾಗುವ ಸ್ಥಿತಿಗೆ ತಲುಪಿದ್ದವು.
ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಮುಂಬೈನಿಂದ ಅಹಮದಾಬಾದ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನ AI-2493, ರನ್ವೇಯಿಂದ ಪಾರ್ಕಿಂಗ್ ಬೇ ಕಡೆಗೆ ತೆರಳುವ ವೇಳೆ ಪೈಲಟ್ ಮಾಡಿದ ತಪ್ಪು ತಿರುವಿನ ಪರಿಣಾಮ ಸಕ್ರಿಯ ಟ್ಯಾಕ್ಸಿವೇಗೆ ಪ್ರವೇಶಿಸಿತು. ಅದೇ ಸಮಯದಲ್ಲಿ ಮುಂಬೈಗೆ ಹಾರಾಟ ನಡೆಸಲು ಸಿದ್ಧವಾಗಿದ್ದ ಇಂಡಿಗೋ ವಿಮಾನ 6E-5160 ಅದೇ ಮಾರ್ಗದಲ್ಲಿ ಚಲಿಸುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಎಟಿಸಿ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಎರಡೂ ವಿಮಾನಗಳ ಪೈಲಟ್ಗಳಿಗೆ ತುರ್ತು ಸೂಚನೆ ನೀಡಿದರು.
ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು – vishwanews24
ಎಟಿಸಿಯ ಸೂಚನೆಗೆ ಸ್ಪಂದಿಸಿದ ಪೈಲಟ್ಗಳು ತಕ್ಷಣವೇ ವಿಮಾನಗಳನ್ನು ನಿಲ್ಲಿಸಿದ ಪರಿಣಾಮ, ಎರಡೂ ವಿಮಾನಗಳು ಕೇವಲ 200 ಮೀಟರ್ ಅಂತರದಲ್ಲಿ ನಿಂತು ಸಂಭವನೀಯ ದುರಂತ ತಪ್ಪಿತು. ಕೆಲವೇ ಕ್ಷಣಗಳ ವಿಳಂಬವಾಗಿದ್ದರೂ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ. ಅಪಾಯದ ಪರಿಸ್ಥಿತಿ ನಿವಾರಣೆಯಾದ ನಂತರ, ತಪ್ಪು ಮಾರ್ಗಕ್ಕೆ ಪ್ರವೇಶಿಸಿದ್ದ ಏರ್ ಇಂಡಿಯಾ ವಿಮಾನವನ್ನು ನೆಲದ ಸಹಾಯಕ ಸಿಬ್ಬಂದಿಯ ನೆರವಿನಿಂದ ಸುರಕ್ಷಿತವಾಗಿ ಅದರ ನಿಗದಿತ ಪಾರ್ಕಿಂಗ್ ಬೇಗೆ ಕರೆದೊಯ್ಯಲಾಯಿತು. ಬಳಿಕ ಇಂಡಿಗೋ ವಿಮಾನವು ತನ್ನ ನಿಗದಿತ ವೇಳಾಪಟ್ಟಿಯಂತೆ ಮುಂಬೈಗೆ ಸುರಕ್ಷಿತವಾಗಿ ಹಾರಾಟ ನಡೆಸಿತು.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಎರಡೂ ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಈ ಗಂಭೀರ ಸುರಕ್ಷತಾ ಲೋಪದ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ಗೆ ಮಾಹಿತಿ ನೀಡಲಾಗಿದ್ದು, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ವಿಮಾನಗಳು ಮುಖಾಮುಖಿಯಾಗುವ ಹಂತಕ್ಕೆ ತಲುಪಿದ್ದ ಸಂದರ್ಭದಲ್ಲೂ ಎಟಿಸಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದರಿಂದ ನೂರಾರು ಪ್ರಯಾಣಿಕರ ಜೀವಗಳು ಸುರಕ್ಷಿತವಾಗಿವೆ.
ಉಡುಪಿ: ಡಿವೈಡರ್ ಮೇಲೇರಿದ ಸ್ಕೂಲ್ ಬಸ್ ; ತಪ್ಪಿದ ಅನಾಹುತ – vishwanews24
