ವಿದೇಶದಿಂದ ಭಾರತಕ್ಕೆ ಬರುವವರಲ್ಲಿ ಕೊರೊನಾ ಲಕ್ಷಣಗಳು ಇಲ್ಲವಾದರೂ 14 ದಿನ ಗೃಹಬಂಧನ ಕಡ್ಡಾಯ -Vishwanews24
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರವು ವೈರಸ್ ನಿಯಂತ್ರಣಕ್ಕೆ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಈ ನಡುವೆ ವಿದೇಶದಿಂದ ಭಾರತಕ್ಕೆ ಬರುವವರಲ್ಲಿ ಕೊರೊನಾ ಲಕ್ಷಣಗಳು ಇಲ್ಲವಾದರೂ ಅವರು ಕಡ್ಡಾಯವಾಗಿ 14 ದಿನ ಬಂಧನದಲ್ಲಿರಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ತಿಳಿಸಿದೆ.
ಐಸಿಎಂಆರ್ ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ಈ ಕುರಿತು ಮಾಹಿತಿ ನೀಡಿದ್ದು, ವಿದೇಶಗಳಿಂದ ಭಾರತಕ್ಕೆ ಬಂದವರು ಕನಿಷ್ಟ ಎರಡು ವಾರಗಳ ಕಾಲ ಗೃಹ ಬಂಧನದಲ್ಲಿರಬೇಕು. ಆ ಎರಡು ವಾರಗಳ ಅವಧಿಯಲ್ಲಿ ಒಂದು ವೇಳೆ ಅವರಲ್ಲಿ ಕೊರೊನಾ ಲಕ್ಷಣಗಳು ಬೆಳವಣಿಗೆಯಾದರೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಭಾರತ ಸೇರಿದಂತೆ ವಿಶ್ವದಾದ್ಯಂತ 150 ಕ್ಕೂ ಹೆಚ್ಚು ದೇಶಗಳಿಗೂ ಕೊರೊನಾ ವೈರಸ್ ಹಬ್ಬಿದೆ. ಭಾರತದಲ್ಲಿ ಸದ್ಯ ಕೊರೊನಾ ವೈರಸ್ ಗೆ 3 ಜನ ಸಾವನ್ನಪ್ಪಿದ್ದು, 139 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
