ವಿಶ್ವದ ಅತಿ ದೊಡ್ಡ ಪ್ರತಿಮೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್!
ನರೇಂದ್ರ ಮೋದಿಯವರು ತಾವು ಅಂದುಕೊಂಡಿದ್ದನ್ನು ಮಾಡಿ ತೋರಿಸುವ ಮನುಷ್ಯ. ಅತ್ಯಂತ ವೇಗದಲ್ಲಿ ಯೋಜನೆಗಳನ್ನು ಪೂರ್ಷಗೊಳಿಸಿ ತನ್ನ ಸಾಮರ್ಥ್ಯವನ್ನು ಅನೇಕ ಬಾರಿ ಸಾಬೀತುಪಡಿಸಿರುವ ನಾಯಕ ನರೇಂದ್ರ ಮೋದಿ. ಒಂದು ಕಾಲದಲ್ಲಿ ಬರಡು ಭೂಮಿಯಾಗಿದ್ದ, ಅತಿವೃಷ್ಟಿ-ಅನಾವೃಷ್ಟಿಗಳಿಂದ ತತ್ತರಿಸಿ ಹೋಗಿದ್ದ ಗುಜರಾತ್ ಅನ್ನು ಅಭಿವೃದ್ಧಿಯ ಶಿಖರಕ್ಕೆ ಏರಿಸಿದ್ದು ಇದೇ ನರೇಂದ್ರ ಮೋದಿ. ಅದರ ಪರಿಣಾಮವಾಗಿಯೇ ಹಲವು ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ಗುಜರಾತ್ ಜನರು ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದರು. ಗುಜರಾತ್ ನ ಅಭಿವೃದ್ಧಿ ಇಡೀ ದೇಶದ ಗಮನ ಸೆಳೆದು, ನಂತರ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ, ಇದೀಗ ಸ್ವತಂತ್ರ ಭಾರತದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ವಿಶ್ವದ ಅತಿ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದಂತಹ ದೇಶ ಕಂಡಂತಹ ಸಮರ್ಥ ನಾಯಕ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಹೆಸರನ್ನು ಅಜರಾಮರಗೊಳಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಚಿಸಿದ್ದರು. ಅದಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಲೋಹಗಳನ್ನು ಸಂಗ್ರಹಿಸಿದ್ದರು. ಆ ಲೋಹಗಳಿಂದ ಇಂದು ವಿಶ್ವದ ಅತಿ ದೊಡ್ಡ ಪ್ರತಿಮೆ ನಿರ್ಮಾಣವಾಗಿದೆ.
ನಾಲ್ಕು ವರ್ಷಗಳಲ್ಲಿ ಈ ಬೃಹತ್ ಏಕತಾ ಪ್ರತಿಮೆಯನ್ನು ಪೂರ್ಣಗೊಳಿಸುವುದಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ನಲವತ್ತೆರಡು ತಿಂಗಳುಗಳಲ್ಲಿಯೇ ತಲೆ ಎತ್ತಿ ನಿಂತಿದೆ. ಇದೇ ಅಕ್ಟೋಬರ್ ಮೂವತ್ತೊಂದರಂದು ಸರ್ದಾರ್ ಪಟೇಲರ ಜನ್ಮ ದಿನ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಏಕತಾ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಬೃಹತ್ ಪ್ರತಿಮೆಯನ್ನು ಭಾರತದ ಎಲ್ ಅಂಡ್ ಟಿ ಕಂಪನಿ ನಿರ್ಮಿಸಿದೆ. ಒಟ್ಟಾರೆ 600 ಅಡಿಗಳಷ್ಟು ಎತ್ತರವಿದೆ. ಸಾಧು ಬೆಟ್ಟದಲ್ಲಿರುವ ಸರ್ದಾರ್ ಸರೋವರದ ತಟದಲ್ಲಿ ಈ ಐತಿಹಾಸಿಕ ಪ್ರತಿಮೆ ತಲೆ ಎತ್ತಿ ನಿಂತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಸರ್ದಾರ್ ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಘೋಷಿಸಿದ್ದಾರೆ. ಈ ಬಾರಿಯ ಏಕತಾ ದಿನದಂದು ಈ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಭಾರತವನ್ನು ಒಗ್ಗೂಡಿಸಿದ ಮಹಾ ನಾಯಕನ ಪ್ರತಿಮೆ ವಿಶ್ವದ ಅತಿ ದೊಡ್ಡ ಪ್ರತಿಮೆಯಾಗಿ ಹೊರಹೊಮ್ಮಲಿದೆ. ಲಕ್ಷಾಂತರ ಜನ ಪ್ರವಾಸಿಗರನ್ನು ಆಕರ್ಷಿಸಿ ಭಾರತದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಬದಲಾಗಲಿದೆ.
