PSI ನೇಮಕಾತಿ ಹಗರಣ : ಅಶ್ವತ್ಥನಾರಾಯಣ ಅವರ ಬಗ್ಗೆ ಕಾಂಗ್ರೆಸ್ನವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ : ಮುಖ್ಯಮಂತ್ರಿ – Vishwanews24
PSI ನೇಮಕಾತಿ ಹಗರಣ : ಅಶ್ವತ್ಥನಾರಾಯಣ ಅವರ ಬಗ್ಗೆ ಕಾಂಗ್ರೆಸ್ನವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ : ಮುಖ್ಯಮಂತ್ರಿ
ಬೆಂಗಳೂರು: ‘ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬಗ್ಗೆ ಕಾಂಗ್ರೆಸ್ನವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಆರೋಪ ಮಾಡುವಾಗ ಸಣ್ಣ ಸಾಕ್ಷ್ಯವಾದರೂ ಬೇಕು. ಆದರೆ, ಜವಾಬ್ದಾರಿಯುತ ಪಕ್ಷವಾದ ಕಾಂಗ್ರೆಸ್ ಹಿಟ್ ಆ್ಯಂಡ್ ರನ್ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಅವಧಿಯಲ್ಲಿ ಹಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಆ ಸಂದರ್ಭದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಪಕ್ಷದ ಕೆಲವರ ಬಂಧನ ಆಗಿದೆ. ಎಲ್ಲಿ ಅವರ ಬಣ್ಣ ಬಯಲಾಗುತ್ತದೊ ಎಂದು ಹೆದರಿ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.
ನಿಷ್ಠುರ ತನಿಖೆ: ‘ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನೆಲ್ಲ ಪರಿಗಣಿಸಲಾಗುವುದು. ದಾಖಲೆಗಳನ್ನು ಪರಿಶೀಲಿಸಿ, ಎಲ್ಲವನ್ನೂ ತನಿಖೆ ಮಾಡುತ್ತೇವೆ. ಮುಕ್ತ, ನಿಷ್ಪಕ್ಷಪಾತ, ನಿಷ್ಠುರ ತನಿಖೆ ಆಗಬೇಕು ಎನ್ನುವುದು ನಮ್ಮ ನಿಲುವು. ಹೀಗಾಗಿ, ಹಲವು ಅಧಿಕಾರಿಗಳ ತಂಡ ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ದಿವ್ಯಾ ಹಾಗರಗಿಯಷ್ಟೆ ಅಲ್ಲ. ಇನ್ನೂ ಹಲವರು ಈ ಪ್ರಕರಣದಲ್ಲಿ ಇದ್ದಾರೆ. ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳನ್ನು ಅಮಾನತು ಮಾಡಿದ್ದೇ ಇದಕ್ಕೆ ಸಾಕ್ಷಿ’ ಎಂದರು.
ನಿಗದಿತ ವೇಳಾಪಟ್ಟಿಯಂತೆ ಮೇ. 16 ರಿಂದಲೇ ಶಾಲೆಗಳು ಪ್ರಾರಂಭ : ಶಿಕ್ಷಣ ಸಚಿವ – Vishwanews24
