ಉಡುಪಿ : ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರಿಕೆ ಆರೋಪ; ಮೂವರ ಬಂಧನ -vishwanews24
ಉಡುಪಿ : ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರಿಕೆ ಆರೋಪ; ಮೂವರ ಬಂಧನ
ಉಡುಪಿ: ರಾಜ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ ಹಾಗೂ ಸುಲಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ಸಹಿತ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೋಟತಟ್ಟು ಗ್ರಾಮದ ಗೊಬ್ಬರಬೆಟ್ಟು ನಿವಾಸಿ ನಾಗೇಂದ್ರ ಪುತ್ರನ್(37), ಪಾರಂಪಳ್ಳಿ ಗ್ರಾಮದ ಪಡುಕೆರೆಯ ಪಿ.ಸುಮಂತ್ ಕುಂದರ್(40), ಸಾಸ್ತಾನದ ಸಚಿನ್ ಶ್ರೀಯಾನ್(32) ಬಂಧಿತ ಆರೋಪಿಗಳು.
ಇವರು ಆ.31ರಂದು ಅನ್ನಭಾಗ್ಯದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಹಾಗೂ ಸುಲಿಗೆಗೆ ಬೆದರಿಕೆ ಹಾಕಿದ ಬಗ್ಗೆ ಕೋಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕೋಟಾ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್. ಹಾಗೂ ಮಹಾಂತೇಶ ಜಾಬಗೌಡ ಮತ್ತು ಸಿಬ್ಬಂದಿ ವಿಜಯೇಂದ್ರ, ಶರತ್ ಹಾಗೂ ಶಿವರಾಜ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಇದರಲ್ಲಿ ನಾಗೇಂದ್ರ ಪುತ್ರನ್ ಹಾಗೂ ಪಿ.ಸುಮಂತ್ ಕುಂದರ್‌ನನ್ನು ಸೆ.2ರಂದು ಮೈಸೂರು ಜಿಲ್ಲೆಯ ಮೈಸೂರು ಪ್ಯಾಲೇಸ್ ಎದುರು ಇರುವ ವಸ್ತು ಪ್ರದರ್ಶನ ಗ್ರೌಂಡ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೋರ್ವ ಆರೋಪಿ ಸಚಿನ್ ಶ್ರೀಯಾನ್‌ನನ್ನು ಸೆ.1ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
